ಬೆಂಗಳೂರು : ಸಚಿವರ ಅಸಹಕಾರ, ಸಮರ್ಪಕವಾಗಿ ಅನುದಾನ ಸಿಗದ ವಿಚಾರವಾಗಿ ಸಿಟ್ಟಾಗಿರುವ ಶಾಸಕರನ್ನು ಶಾಂತವಾಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಗುರುವಾರ 5ಕ್ಕೂ ಹೆಚ್ಚಿನ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಕ್ಷೇತ್ರದ ಕೆಲಸಗಳಿಗೆ ಅಗತ್ಯವಿರುವ ಅನುದಾನದ ಕುರಿತು ಪಟ್ಟಿ ನೀಡು ವಂತೆಯೂ ಸೂಚನೆ ನೀಡಿದ್ದಾರೆ.
ದೆಹಲಿಯಿಂದ ವಾಪಸಾದ ನಂತರದಿಂದ ಶಾಸಕರ ಅಸಮಾಧಾನ ಶಮನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬುಧವಾರ ರಾತ್ರಿ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ ಜತೆಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಜತೆಗೆ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವಂತೆ ನಡೆದುಕೊಳ್ಳದಂತೆಯೂ ತಿಳಿ ಹೇಳಿದ್ದರು. ಗುರುವಾರವೂ ಶಾಸಕರೊಂದಿಗೆ ಮಾತುಕತೆ ಮುಂದುವರಿಸಿರುವ ಸಿದ್ದರಾಮಯ್ಯ, ಗೃಹ ಕಚೇರಿ ಕೃಷ್ಣಾದಲ್ಲಿ ಬೇಳೂರು ಗೋಪಾಲಕೃಷ್ಣ, ಪಿ.ಎಂ. ನರೇಂದ್ರಸ್ವಾಮಿ, ಯು.ಬಿ. ಬಣಕಾರ್, ರಾಘವೇಂದ್ರ ಹಿಟ್ನಾಳ್ ಅವರನ್ನು ಪ್ರತ್ಯೇ ಕವಾಗಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಎಲ್ಲ ಶಾಸಕರಿಗೂ, ಮಾಧ್ಯಮಗಳ ಮುಂದೆ ಸಚಿವರು ಮತ್ತು ಸರ್ಕಾರದ ಕುರಿತು ಹೇಳಿಕೆಗಳನ್ನು ನೀಡಬಾರದು ಎಂದು ತಾಕೀತು ಮಾಡಿದ್ದಾರೆ. ಜತೆಗೆ ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಬಳಿ ಚರ್ಚಿಸುವಂತೆ ಸೂಚನೆ ನೀಡಿದ್ದಾರೆ. ಬೇಳೂರು ಗೋಪಾಲಕೃಷ್ಣ ಅವರೊಂದಿಗಿನ ಚರ್ಚೆ ವೇಳೆ ಮಾಧ್ಯಮಗಳೆದುರು ಅವರು ನೀಡಿದ ಹೇಳಿಕೆ ಕುರಿತು ಮುಖ್ಯಮಂತ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ

