ಬೆಂಗಳೂರು: ಎಲ್ಲಾ ಪರಿಶಿಷ್ಟ ಪಂಗಡ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವಾಲ್ಮೀಕಿ ಜಯಂತಿ ಪ್ರಯುಕ್ತ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ, ಐವರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಮೂಲಕ ಎಸ್‌ಸಿ -ಎಸ್‌ಟಿ ಸಮುದಾಯದ ಜನಸಂಖ್ಯೆಗನುಗುಣವಾಗಿ ಹಣವನ್ನು ಆಯವ್ಯಯದಲ್ಲಿ ಮೊದಲಿಗೆ ಮೀಸಲಿಟ್ಟಿದ್ದು ನಮ್ಮ ಸರ್ಕಾರ. ತಳ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಹೋಬಳಿಗೊಂದು ವಸತಿ ಶಾಲೆ ಆರಂಭಿಸುವುದು ಶತಃಸಿದ್ದ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು
ತಳ ಸಮುದಾಯಗಳು, ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು ಇಂಥ ಹೊತ್ತಲ್ಲೇ ವಾಲ್ಮೀಕಿ ಮಹರ್ಷಿಗಳು ಸಂಸ್ಕೃತ ಕಲಿತು ರಾಮಾಯಣ ಮಹಾಕಾವ್ಯ ಬರೆದು ಜಗತ್ತಿಗೇ ಪ್ರೇರಣೆಯಾದರು. ಅವರು 24 ಸಾವಿರ ಶ್ಲೋಕಗಳಿರುವ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ವಿಶ್ವಮಾನವರಾಗಿರುವುದು ಹೆಮ್ಮೆಯ ಸಂಗತಿ ಎಂದು ಸ್ಮರಿಸಿದರು.
ಶಾಕುಂತಲೆ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯ, ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಸಮುದಾಯ ಇಂತಹ ಮಹನೀಯರ ಶ್ರೇಷ್ಠತೆ ಯನ್ನು ಗೌರವಿಸಬೇಕೇ ಹೊರತು ಅವರು ಯಾವ ಜಾತಿ ಎಂದು ಗುರುತಿಸಬಾರದು ಎಂದರು