121
ಬೆಂಗಳೂರು : ನೂರಾರು ಶವಗಳನ್ನು ಹೂತ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಯಾರೋ ಹೇಳಿದರೆಂದು ತನಿಖೆಯನ್ನು ಎಸ್ ಐಟಿಗೆ ನೀಡಲು ಸಾಧ್ಯವಿಲ್ಲ. ಆರೋಪಗಳ ಕುರಿತು ಪೊಲೀಸರು ಈಗಾಗಲೇ ತನಿಖೆ ಮಾಡುತ್ತಿದ್ದಾರೆ. ಅವರು ಏನು ವರದಿ ನೀಡು ತ್ತಾರೆ ಎಂಬುದನ್ನು ಆಧರಿಸಿ ನಂತರ ಉಳಿದ ವಿಚಾರ ನೋಡೋಣ ಎಂದಿದ್ದರು. ಆದರೆ, ಇದೀಗ ಪ್ರಕರಣವನ್ನು ದಿಢೀರ್ ಎಸ್‌ಐಟಿ ತನಿಖೆಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಈ ಎಸ್‌ಐಟಿ ತಂಡ ರಚಿಸಲಾಗಿದೆ.

