237
ಬೆಂಗಳೂರು : ಕೆ.ಆರ್.ನಗರ ಮೂಲದ ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಭಾನುವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಕೈದಿ ಸಂಖ್ಯೆ 15528 ನೀಡಲಾಗಿದೆ.
ಶನಿವಾರ ಜನಪ್ರತಿನಿಧಿ ಗಳ ವಿಶೇಷ ನ್ಯಾಯಾಲಯವು ಜೀವನ ಪರ್ಯಂತ ಸೆರೆವಾಸ ತೀರ್ಪು ನೀಡಿದ ಬಳಿಕ ಇಷ್ಟು ದಿನ ವಿಚಾರಣಾಧೀನ ಕೈದಿಯಾಗಿದ್ದ ಪ್ರಜ್ವಲ್ ಈಗ ಸಜಾ ಬಂಧಿಯಾಗಿದ್ದಾರೆ.
ಭಾನುವಾರ ಬೆಳಗ್ಗೆ ಜೈಲು ಅಧಿಕಾರಿಗಳು ನಿಯಮಾನುಸಾರ ಪ್ರಜ್ವಲ್‌ಗೆ ಸಜಾಕೈದಿ ಸಂಖ್ಯೆ, ಬಿಳಿ ಸಮವಸ್ತ್ರ ನೀಡಿದ್ದಾರೆ. ಭದ್ರತೆ ದೃಷ್ಟಿಯಿಂದ ಜೈಲಿನ ಹೈಸೆಕ್ಯುರಿಟಿ ಸೆಲ್‌ನಲ್ಲೇ ಪ್ರಜ್ವಲ್‌ರನ್ನು ಇರಿಸಲಾಗಿದೆ. ಮಾಜಿ ಪ್ರಧಾನಿ ಮೊಮ್ಮಗನಾದ ಅಪರಾಧಿ ಪ್ರಜ್ವಲ್ ಇನ್ನು ಮುಂದೆ ಜೈಲು ನಿಯಮಾವಳಿ ಪ್ರಕಾರ ಜೈಲು ಅಧಿಕಾರಿಗಳು ನೀಡುವ ಕೆಲಸ ಮಾಡಿಕೊಂಡು ದಿನ ದೂಡಬೇಕು.

