ಕೊಪ್ಪಳ : 15 ದಿನ ನಡೆದ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ ತೆರೆ ಕಂಡಿದೆ. ಮಹಾದಾಸೋಹದ ಕೊನೆ ದಿನವಾದ ಬುಧವಾರ ಅಮಾವಾಸ್ಯೆಯಂದು ಗವಿಮಠಕ್ಕೆ ಭಕ್ತಸಾಗರವೇ ಹರಿದು ಬಂದಿದ್ದರಿಂದ ದಾಸೋಹದಲ್ಲಿ ಮತ್ತು ಮಠದ ದರ್ಶನ ಪಡೆಯಲು ಗಂಟೆಗಟ್ಟಲೇ ಜನರು ಕಾಯಬೇಕಾಯಿತು
ಸುಮಾರು 2 ಲಕ್ಷ ಜನರು ಪ್ರಸಾದ ಸೇವಿಸಿ ಪುನೀತರಾದರು. ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ದರ್ಶನಕ್ಕೆ ಮಠದ ಕರ್ತೃಗದ್ದುಗೆಯಿಂದ ಹಿಡಿದು ಮಠದ ಆವರಣದಲ್ಲಿ ಬರೋಬ್ಬರಿ ನಾಲ್ಕಾರು ಸಾಲುಗಳು ಕಂಡು ಬಂದವು, ಕೊಪ್ಪಳ ಸೇರಿದಂತೆ ಜಿಲ್ಲಾದ್ಯಂತ ಹಾಗೂ ನೆರೆಯ ಜಿಲ್ಲೆಯಿಂದಲೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಮಠದ ಆವರಣದುದ್ದಕ್ಕೂ ಜನವೋ ಜನ ಸೇರಿದ್ದರಿಂದ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಲು ಹೆಣಗಾಡಬೇಕಾಯಿತು. ಮಠದ ಆವರಣದ ಬಳಿ ವಾಹನ ನಿಲುಗಡೆ, ಸಂಚಾರ ದೊಡ್ಡ ಸವಾಲಾಗಿತ್ತು. ಬೆಳಗ್ಗೆ 6.00 ಗಂಟೆಯಿಂದಲೇ ಪ್ರಾರಂಭವಾದ ಭಕ್ತರ ಆಗಮನ, ಮಧ್ಯಾಹ್ನದ ವೇಳೆಗೆ ಗಿಜಿಗಿಡುವಂತೆ ಮಾಡಿತು.