ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ ಬೆನ್ನಲ್ಲೇ ನಟ ದರ್ಶನ್ ತೂಗುದೀಪ, ಅವರ ಪ್ರಿಯತಮೆ ಸೇರಿ ಏಳು ಆರೋಪಿಗಳಿಗೆ ವಿಚಾರಣಾಧೀನ ಕೈದಿಗಳ ಸಂಖ್ಯೆಯನ್ನು ಕಾರಾಗೃಹದ ಅಧಿಕಾರಿಗಳು ನೀಡಿದ್ದಾರೆ.
ಕೊಲೆ ಪ್ರಕರಣದ ಒಂದನೇ ಆರೋಪಿಯಾಗಿರುವ ಪವಿತ್ರಾ ಗೌಡ (7313), ದರ್ಶನ್ (7314), ನಾಗರಾಜ್ (7315), ಲಕ್ಷ್ಮಣ್ (7316), ಪ್ರದೂಷ್ (7317) ಅವರಿಗೆ ಗುರುವಾರ ರಾತ್ರಿ ಯುಟಿ (ವಿಚಾರಣಾಧೀನ ಕೈದಿ) ಸಂಖ್ಯೆಯನ್ನು ಕಾರಾಗೃಹ ಅಧಿಕಾರಿಗಳು ಕೊಟ್ಟಿದ್ದಾರೆ.
ಪ್ರಕರಣದಲ್ಲಿ ಶುಕ್ರವಾರ ಜೈಲಿಗೆ ಬಂದ ದರ್ಶನ್ ಅವರ ಸಹಚರರಾದ ಚಿತ್ರದುರ್ಗದ ಅನು ಕುಮಾರ್(7322), ಜಗದೀಶ್‌ಗೆ (7323) ಸಹ ಯುಟಿ ನಂಬರ್ ಸಿಕ್ಕಿದೆ
8 ತಿಂಗಳ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ದರ್ಶನ್ ಹಾಗೂ ಅವರ ಸಹಚರರು ಜಾಮೀನು ಪಡೆದು ಹೊರ ಬಂದಿದ್ದರು. ಆದರೆ ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದ ಬೆನ್ನಲ್ಲೇ ಮತ್ತೆ ದರ್ಶನ್, ಪವಿತ್ರಾ ಗೌಡ ಸೇರಿ ಐದು ಮಂದಿಯನ್ನು ಗುರುವಾರ ರಾತ್ರಿ ಬಂಧಿಸಿ ವಿಜಯನಗರ ಉಪ ವಿಭಾಗದ ಪೊಲೀಸರು ಜೈಲಿಗೆ ಕಳುಹಿಸಿದ್ದರು.

