ಬೆಂಗಳೂರು : ತಮ್ಮ ಮಲತಂದೆಯೂ ಆಗಿರುವ ಡಿಜಿಪಿ ಅವರ ಹೆಸರು ಬಳಸಿ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ (ಪ್ರೋಟೋಕಾಲ್) ಉಪಯೋಗಿಸಿಕೊಂಡಿರುವುದು ಮಾತ್ರವಲ್ಲ, ಚಿನ್ನ ಕಳ್ಳ ಸಾಗಾಣಿಕೆಗೆ ಸರ್ಕಾರಿ ಕಾರನ್ನು ಕೂಡ ನಟಿ ರನ್ಯಾರಾವ್ ಬಳಸಿರಬಹುದು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯಗಳ ತನಿಖೆಯಲ್ಲಿ ಅನುಮಾನ ವ್ಯಕ್ತವಾಗಿದೆ.
ದುಬೈನಿಂದ ಮಾ.3 ರಂದು ಸಂಜೆ ಆಗಮಿಸಲಿದ್ದ ನಟಿ ರನ್ಯಾರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಖಾಸಗಿ ವಾಹನ ಬಂದಿತ್ತು. ಆದರೆ ಈ ಹಿಂದೆ ವಿಮಾನ ನಿಲ್ದಾಣಕ್ಕೆ ಹಲವು ಬಾರಿ ರನ್ಯಾ ಅವರನ್ನು ಅವರ ಮಲ ತಂದೆ, ರಾಜ್ಯ ಪೊಲೀಸ್ ಗೃಹ ಮಂಡಳಿ ಎಂ.ಡಿ, ಡಿಜಿಪಿ ರಾಮಚಂದ್ರರಾವ್ ಅವರ ಸರ್ಕಾರಿ ಕಾರಿನಲ್ಲಿ ಪಿಕ್ ಅಂಡ್ ಡ್ರಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ತಮ್ಮ ತಂದೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ವಾಹನದಲ್ಲೇ ಅವರು ಚಿನ್ನ ಸಾಗಿಸಿರುವ ಸಾಧ್ಯತೆ ಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರನ್ಯಾ ಅವರ ಟ್ರಾವೆಲ್ಸ್ ಹಿಸ್ಟರಿ ಪಡೆದು ಡಿಆರ್‌ಐ ಪರಿಶೀಲಿಸಿದೆ. ಈ ಬೆಳವಣಿಗೆಯಿಂದ ಡಿಜಿಪಿಯ ಸರ್ಕಾರಿ ಕಾರು ಚಾಲಕರಿಗೆ ಡಿಆರ್‌ಐ ತನಿಖೆ ಎದುರಾಗಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

