ಬೆಂಗಳೂರು : ವಿದೇಶದಿಂದ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಚಿನ್ನ ಸಾಗಾಣಿಕೆ ಮಾಡುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ಪೊಲೀಸ್ ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ಮತ್ತು ಚಲನಚಿತ್ರ ನಟಿ ರನ್ಯಾ ರಾವ್ ಅವರನ್ನು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲೆಜೆನ್ಸಿ (ಡಿ ಆರ್‌ಇ) ಅಧಿಕಾರಿಗಳು ಬಂಧಿಸಿದ್ದಾರೆ.
ತಮ್ಮ ಪತಿ ಜಿತಿನ್ ಹುಕ್ಕೇರಿ ಜತೆ ದುಬೈನಿಂದ ಕೆಐಎಗೆ ಸೋಮವಾರ ರಾತ್ರಿ 7.00 ರ ಸುಮಾರಿಗೆ ಬಂದಿಳಿದ ರನ್ಯಾ ಅವರನ್ನು ಡಿಆರ್‌ಇ ಅಧಿಕಾ ರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ತಪಾಸಣೆಗೆ ಒಳಪಡಿಸಿದಾಗ ಅವರು ಧರಿಸಿದ್ದ ಲೆದರ್ ಜಾಕೆಟ್‌ನಲ್ಲಿ 12 ಕೋಟಿ ಮೌಲ್ಯದ 14.8 ಕೇಜಿ ತೂಕದ ಚಿನ್ನದ ಬಿಸ್ಕೆಟ್ ಹಾಗೂ ಗಟ್ಟಿಗಳು ಪತ್ತೆಯಾಗಿವೆ.
ಬಳಿಕ ತಮ್ಮ ಕಚೇರಿ ಕರೆದೊಯ್ದು ರನ್ಯಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ಮಂಗಳವಾರ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೊಪಿಸಿ ಆದೇಶಿಸಿದ ಮೇರೆಗೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ರನ್ಯಾ ಸೇರಿದ್ದಾರೆ

