ಬೆಳಗಾವಿ : ಸಿದ್ದರಾಮಯ್ಯ ಸರ್ಕಾರ ಬಂದು ಎರಡು ವರ್ಷವಾಗಿದೆ ಭಂಡತನದಿಂದ ಐದು ಗ್ಯಾರಂಟಿ ಕೊಡುತ್ತೇವೆ ಅಂತಿದ್ದರು. ಆದರೆ ಈಗ ಗ್ಯಾರಂಟಿ ಹಣವನ್ನೂ ಕೊಡುತ್ತಿಲ್ಲ ಗೃಹಲಕ್ಷ್ಮಿ ಹಣ ಮೂರು ತಿಂಗಳಿಂದ ಬಂದ್ ಆಗಿದೆ ಎಂದು ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಗ್ಯಾರಂಟಿಯೂ ಚಾಲ್ತಿಯಲ್ಲಿ ಇಲ್ಲ. ಬೋಗನ್ ಹೇಳಿ ವೋಟ್ ಹಾಕಿಸಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಜನರಿಗೆ ಮೋಸ ಮಾಡುತ್ತಿದ್ದಾರೆ. ಕಳೆದ ಬಾರಿ ಬಜೆಟ್ ಮಂಡನೆ ಮಾಡಿದ್ದರ ಪೈಕಿ ಒಂದೂವರೆ ಲಕ್ಷ ಕೋಟಿ ಹಣ ಬಾಕಿ ಇದೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ದಿನನಿತ್ಯ ಕೊಲೆ, ಸುಲಿಗೆ ಆಗುತ್ತಿವೆ. ಅಂತರ್ ರಾಜ್ಯದವರು ಬಂದು ಕಳ್ಳತನ ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಪುಂಡರ ಹಾವಳಿ ಹೆಚ್ಚಿದೆ. ಸರ್ಕಾರದ ಹಿಡಿತ ತಪ್ಪಿ ಹೋಗಿದ್ದು, ಸಿದ್ದರಾಮಯ್ಯ ಎಲ್ಲದರಲ್ಲೂ ವಿಫಲರಾಗಿದ್ದಾರೆ ಎಂದು ಆರೋಪಿಸಿದರು

