ಬೆಂಗಳೂರು : ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವೀರ ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತೇಜಸ್ ಎ.ಗೌಡ ಎಂಬುವವರು ನಗರದ ದಕ್ಷಿಣ ವಿಭಾಗದ ಡಿಸಿಪಿಗೆ ದೂರು ನೀಡಿದ್ದಾರೆ. ‘ಬಸವನಗುಡಿ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಅ.2ರಂದು ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್ ಭಾಷಣ ಮಾಡುವಾಗ, ಅಪ್ಪಟ ರಾಷ್ಟ್ರೀಯವಾದಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಅವಹೇಳನದ ಮಾತುಗಳನ್ನು ಆಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವಅವರು ಸಾವರ್ಕರ್ ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳಿಂದ ನಮಗೆ ತುಂಬಾ ನೋವಾಗಿದೆ. ಅವರು ಕೋಮು-ದ್ವೇಷ, ಕೋಮು-ಪ್ರಚೋದನೆಗೆ ಒತ್ತಡ ತರುವಂತಹ ಮಾತುಗಳನ್ನು ಆಡಿದ್ದಾರೆ. ಹೀಗಾಗಿ ದಿನೇಶ್ ಗುಂಡೂರಾವ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ತೇಜಸ್ ಎ.ಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ.