ಚಿತ್ರದುರ್ಗ: ರೇಣುಕಾಸ್ವಾಮಿ ಪಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಯಾವುದೇ ಮುಲಾಜಿಲ್ಲದೆ, ಯಾವುದೇ ಒತ್ತಡಕ್ಕೆ ಒಳಗಾಗದೆ ತನಿಖೆ ಮಾಡುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ತುರುವನೂರು ರಸ್ತೆಯ ಮೃತ ರೇಣುಕಾಸ್ವಾಮಿ ಅವರ ಮನೆಗೆ ಮಂಗಳವಾರ ಭೇಟಿ ನೀಡಿ, ತಂದೆ ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರೇಣುಕಾಸ್ವಾಮಿ ಪ್ರಕರಣ ಎಲ್ಲರಿಗೂ ಬಹಳ ನೋವಿನ ಸಂಗತಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸುಮಾರು 17 ಮಂದಿಯನ್ನು ಬಂಧಿಸಲಾಗಿದೆ. ಅವರನ್ನು ತನಿಖೆಗೆ ಒಳಪಡಿಸಿ, ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಜೀವನ ಸಾಗಿಸಲು ರೇಣುಕಾ ಸ್ವಾಮಿ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಎಂಬುವುದು ಮೃತ ರೇಣುಕಾ ಸ್ವಾಮಿ ಕುಟುಂಬದವರ ಬೇಡಿಕೆಯಾಗಿದ್ದು ಈ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ತಿರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು