ಬೆಂಗಳೂರು : ಈಗಾಗಲೇ ತನಿಖಾ ಹಂತದಲ್ಲಿರುವ ಬಿಜೆಪಿ ಅಧಿಕಾರಾವಧಿಯ ಎಲ್ಲ ಹಗರಣಗಳ ತನಿಖಾ ವರದಿ ಆದಷ್ಟು ಬೇಗ ಸರ್ಕಾರದ ಕೈಸೇರುವಂತೆ ಕ್ರಮ ವಹಿಸುವುದು. ಜೊತೆಗೆ ಇದುವರೆಗೆ ತನಿಖೆಗೆ ವಹಿಸದ ಇನ್ನೂ ಒಂದಷ್ಟು ಪ್ರಕರಣಗಳನ್ನು ತನಿಖೆಗೆ ವಹಿಸುವುದು ಒಟ್ಟಿನಲ್ಲಿ ಬಿಜೆಪಿ ಅವಧಿಯ ಒಂದೊಂದು ಹಗರಣದ ಪ್ರಕರಣಗಳ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು
ಇದು, ಬಿಜೆಪಿ ಅವಧಿಯ ಹಗರಣಗಳ ತನಿಖಾ ಪ್ರಗತಿ ಪರಿಶೀಲಿಸಿ ತ್ವರಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಚಿಸಿರುವ ಗೃಹ ಸಚಿವ ಡಾ. ಜಿ.ಪರಮೇಶ್ವರ್ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ಶುಕ್ರವಾರ ನಡೆಸಿದ ಮೊದಲ ಸಭೆಯಲ್ಲಿ ಕೈಗೊಂಡಿರುವ ಸ್ಪಷ್ಟ ನಿರ್ಧಾರ.
ವಿಧಾನಸೌಧದಲ್ಲಿ ನಡೆದ ಮೊದಲ ಸಭೆಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಎಚ್.ಸಿ.ಮಹದೇವಪ್ಪ ಸೇರಿದಂತೆ ಸಮಿತಿಯ ಇತರೆ ಎಲ್ಲ ಸದಸ್ಯರೂ ಹಾಜರಿದ್ದರು. ಸಭೆಯಲ್ಲಿ ಪ್ರಮುಖ ವಾಗಿ ಬಿಜೆಪಿ ಅವಧಿಯ ಪ್ರತಿಯೊಂದು ಹಗರಣಗಳ ತನಿಖೆಯನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ.