ಬೆಂಗಳೂರು : ಹಿಜಾಬ್ ವಿವಾದ ಸಂದರ್ಭದಲ್ಲಿ ಕುಂದಾಪುರದ ಪಿಯು ಕಾಲೇಜಿನ ಪ್ರಾಂಶುಪಾಲ ವಿದ್ಯಾರ್ಥಿನಿಯರನ್ನು ನಡೆಸಿಕೊಂಡಿರುವ ರೀತಿಯ ವಿಚಾರವಾಗಿ ಪ್ರಶಸ್ತಿಯನ್ನು ತಡೆ ಹಿಡಿಯಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಕುಂದಾಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ಬಿ.ರಾಮಕೃಷ್ಣ ಅವರನ್ನು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿ, ನಂತರ ತಡೆ ಹಿಡಿದಿರುವ ಕುರಿತು ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಜಾಬ್ ವಿಚಾರವಾಗಿ ಸರ್ಕಾರದ ಆದೇಶ ಇದ್ದರೂ ಆ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಹೇಗೆ ನಡೆಸಿಕೊಂಡರು ಎಂಬ ವಿಚಾರವಾಗಿ ತಡೆ ಹಿಡಿಯಲಾಗಿದೆ. ಅದನ್ನು ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಪ್ರಶಸ್ತಿಗೆ ಆಯ್ಕೆ ಮಾಡುವಾಗ ಶಿಕ್ಷಕರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲನೆ ನಡೆಸದ ಕಾರಣ ಈ ರೀತಿಯಾಗಿದೆ. ಇದರಲ್ಲಿ ದ್ವೇಷ ರಾಜಕಾರಣ ಮತ್ತು ರಾಜಕೀಯ ಇಲ್ಲ ಎಂದು ಹೇಳಿದರು.