ಬೆಂಗಳೂರು : ಭ್ರಷ್ಟ ಅಧಿಕಾರಿಗಳ ವಿರುದ್ಧ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಮಂಗಳವಾರ ನಸುಕಿನ ವೇಳೆ ರಾಜ್ಯಾದ್ಯಂತ 40ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದೆ. 9 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಹೆಡೆಮುರಿ ಕಟ್ಟಿದ್ದಾರೆ.
ಬೆಂಗಳೂರು, ಮೈಸೂರು, ದಾವಣಗೆರೆ, ಧಾರವಾಡ, ಬೀದರ್, ಹಾವೇರಿಯಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು 22 ಕೋಟಿ ರೂ. ಅಧಿಕ ಮೌಲ್ಯದ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿದ್ದಾರೆ. ಧಾರವಾಡದಲ್ಲಿ ಕೆಐಎಡಿಬಿ ಎಇಇ ಗೋವಿಂದಪ್ಪ ಅವರ ಗಾಂಧಿನಗರ ಬಡಾವಣೆಯಲ್ಲಿನ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ. ಹಾವೇರಿ ನಗರದ ಬಸವೇಶ್ವರ ನಗರದ 1ನೇ ಅಡ್ಡರಸ್ತೆ ಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಘಟಕದ ಸಹಾಯಕ ಎಂಜಿನಿಯರ್ ಕಾಶಿನಾಥ್ ಭಜಂತ್ರಿ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ