ಬೆಂಗಳೂರು : ಕಳೆದ 45 ವರ್ಷಗಳಿಂದ ನಿರಂತರವಾಗಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುತ್ತಾ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಪಕ್ಷಾತೀತವಾಗಿ ಸದಸ್ಯರು ಅಭಿನಂದಿಸಿದರು.
ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ, ವಿವಿಧ ಖಾತೆಗಳ ಸಚಿವರಾಗಿ, ಸಭಾಪತಿಯಾಗಿ ಹೊರಟ್ಟಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಂಡ ಸದಸ್ಯರು, ಹೊರಟ್ಟಿ ಅವರು ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಲು ಅವರು ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ, ಶಿಕ್ಷಕರ ಸಮಸ್ಯೆ ಬಗೆಹರಿಸಿರುವುದು ಕಾರಣವಾಗಿದೆ. ಅಪಾರ ಅನುಭವ ಹೊಂದಿರುವ ಹೊರಟ್ಟಿ ಅವರು ಪರಿಷತ್ತಿನ ಸದಸ್ಯರಾಗಿ 50 ವರ್ಷ ಸಹ ಪೂರೈಸಲಿ ಎಂದು ಸದಸ್ಯರು ಆಶಿಸಿದರು.
ಕಾಂಗ್ರೆಸ್ಸಿನ ಮಂಜುನಾಥ್ ಭಂಡಾರಿ ಮಾತನಾಡಿ, 18 ಮುಖ್ಯಮಂತ್ರಿಗಳು, 432 ಸಚಿವರು, ಐದು ಸಾವಿರ ಶಾಸಕರನ್ನು ನೋಡುವಂತಹ ಅವಕಾಶ ಬಸವರಾಜ ಹೊರಟ್ಟಿ ಅವರಿಗೆ ದೊರೆತಿದೆ. ಬಹುಶಃ ಇಂತಹ ಅವಕಾಶ ಬೇರೆ ಯಾರಿಗೂ ಸಿಗುವುದಿಲ್ಲ. ಹೊಸ ಸದಸ್ಯರಿಗೆ ಸಲಹೆ, ಸೂಚನೆ ನೀಡುವ ಮೂಲಕ ಸದಸ್ಯರು ಸದನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿಸಿಕೊಡುವ ಕೆಲಸ ಮಾಡಿದ್ದಾರೆ ಎಂದರು. ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ್, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು

