ಬೆಂಗಳೂರು : ಕಳೆದ 2 ದಶಕಗಳಿಂದ ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣ ಸೇರಿದಂತೆ ಹಲವು ಕೊಲೆ, ಅತ್ಯಾಚಾರ, ಶವಗಳ ಹೂಳುವಿಕೆಯ ಬಗ್ಗೆ ಮಾಡಲಾಗುತ್ತಿರುವ ಆರೋಪಗಳನ್ನು ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತಳ್ಳಿಹಾಕಿದ್ದು, ಅವುಗಳು ಸುಳ್ಳು ಮತ್ತು ಆಧಾರರಹಿತ’ ಎಂದು ಹೇಳಿದ್ದಾರೆ. ಜತೆಗೆ, ಸತ್ಯವನ್ನು ಬೆಳಗಿಕೆ ತರುವ ಸಲುವಾಗಿ ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿರುವ ವೀರೇಂದ್ರ ಹೆಗ್ಗಡೆ ಅವರು, ‘ಈಆರೋಪಗಳು ಆಧಾರರಹಿತ ಮತ್ತು ಸುಳ್ಳು. ಇಂಥ ಆರೋಪಗಳಿಂದ ನಾನು ಬಹಳ ನೊಂದಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲಿ ವಿಷಯಗಳನ್ನು ಬಿಂಬಿಸುವ ರೀತಿ ನೈತಿಕವಾಗಿ ತಪ್ಪು. ಈ ಕಾರಣಕ್ಕಾಗಿಯೇ ಎಸ್‌ಐಟಿ ರಚನೆ ಕುರಿತ ಸರ್ಕಾರದ ನಿರ್ಧಾರವನ್ನು ನಾವು ಅಂದೇ ಸ್ವಾಗತಿಸಿದ್ದೆವು. ಅದನ್ನು ರಚಿಸಿದ್ದುಒಳ್ಳೆಯದು.ಸತ್ಯವು ಒಮ್ಮೆಗೇ ಹೊರ ಬರಬೇಕು. ಆರೋಪ ಮಾಡಿ, ಅವು ಹಾಗೆಯೇ ಉಳಿಯುವುದು ಒಳ್ಳೆಯದಲ್ಲ. ಹೀಗಾಗಿ ಆರೋಪಗಳ ಕುರಿತು ತ್ವರಿತವಾಗಿ ತನಿಖೆ ನಡೆಸಬೇಕಿದೆ’ ಎಂದು ಮನವಿ ಮಾಡಿದರು

