Home » ಕಾಲ್ತುಳಿತ ದುರಂತ : ಪೊಲೀಸ್‌ ಆಯುಕ್ತ ಸೇರಿ ಐವರ ತಲೆದಂಡ
 

ಕಾಲ್ತುಳಿತ ದುರಂತ : ಪೊಲೀಸ್‌ ಆಯುಕ್ತ ಸೇರಿ ಐವರ ತಲೆದಂಡ

by Kundapur Xpress
Spread the love

ಬೆಂಗಳೂರು : ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ 11 ಜನಬಲಿಯಾದ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಐದು ಮಂದಿ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜತೆಗೆ ಘಟನೆ ಕುರಿತು ಹೈಕೋರ್ಟ್ ನಿ. ನ್ಯಾ. ಮೈಕಲ್ ಡಿ.ಕುನ್ಹಾ ಅವರ ಏಕಸದಸ್ಯ ತನಿಖಾ ಆಯೋಗ ರಚನೆಗೆ ತೀರ್ಮಾನಿಸಿದೆ.

ಅಲ್ಲದೆ, ಈ ಘಟನೆ ಸಂಬಂಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ನಿರ್ಲಕ್ಷ್ಯದ ಆರೋಪ ಹೊತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಹಾಗೂ ಡಿಎನ್ಎ ಇವೆಂಟ್ ಮ್ಯಾನೇಜ್‌ಮೆಂಟ್ ಪ್ರೈ.ಲಿ. ಸಂಸ್ಥೆಗಳ ಪ್ರತಿನಿಧಿಗಳನ್ನು ಕೂಡಲೇ ಬಂಧಿಸುವಂತೆಯೂ ಸೂಚಿಸಲಾಗಿದೆ.

ಈ ಮೂರು ಸಂಸ್ಥೆಗಳ ಲೋಪದ ಕುರಿತ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಇದರ ಜತೆಗೆ ಈಗಾಗಲೇ ಆರಂಭವಾಗಿರುವ ಮ್ಯಾಜಿಸ್ಟ್ರೇಟ್ ತನಿಖೆಯೂ ಮುಂದುವರಿಯಲಿದೆ.

ಗುರುವಾರ ಸಚಿವ ಸಂಪುಟ ಸಭೆ ನಂತರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದೀರ್ಘ ಮಾತುಕತೆ ನಡೆಸಿ ಈ ತೀರ್ಮಾನ ಕೈಗೊಂಡರು.

ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ದುರ್ಘಟನೆ ಬಗ್ಗೆ ಪರಿಶೀಲಿಸಿ ಮೇಲ್ನೋಟಕ್ಕೆ ಯಾವೆಲ್ಲ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯ ಕಂಡು ಬಂದಿದೆಯೋ ಅವರ ವಿರುದ್ದ ಕ್ರಮಕ್ಕೆ ನಿರ್ಧರಿಸಲಾಗಿದೆ. ಅದರನ್ವಯ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ, ಕೇಂದ್ರ ವಿಭಾಗದ ಡಿಸಿಪಿ, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ, ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತೆಯ ಹೊಣೆ ನೀಡಲಾಗಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ ವಿಕಾಸ್ ಅವರನ್ನು ಅಮಾನತು ಮಾಡಲಾಗುತ್ತಿದೆ ಎಂದು ಹೇಳಿದರು.

 

Related Articles

error: Content is protected !!