ಹುಬ್ಬಳ್ಳಿ : ದೆಹಲಿಯ ಜನತೆ ಆಮ್ ಆದ್ಮಿ ಪಕ್ಷದ ಭ್ರಷ್ಟಾಚಾರ, ದುರಾಡಳಿತದ ಪಾಪ ಹಾಗೂ ಕಾಂಗ್ರೆಸ್‌ಗೆ ಒಂದು ಸ್ಥಾನ ನೀಡದೆ ಅವರ ಸಂಪೂರ್ಣ ಪಾಪ ತೊಳೆದು ಹಾಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿದೆ ಮಾತನಾಡಿದ ಅವರು, ಕಾಂಗ್ರೆಸ್‌ನ ಅನೇಕ ಮುಖಂಡರು ಪ್ರಯಾಗರಾಜ್‌ಗೆ ಹೋಗಿ ಪುಣ್ಯಸ್ನಾನ ಮಾಡಿದ್ದಾರೆ. ಅವರನ್ನು ಏಕೆ ಪ್ರಶ್ನಿಸಲಿಲ್ಲ? ದೇಶ ಸಂಸ್ಕೃತಿಯ ಬಗ್ಗೆ ಟೀಕೆ ಮಾಡಿದ ಕಾಂಗ್ರೆಸ್ಗೆ ದಿಲ್ಲಿ ಚುನಾವಣೆಯಲ್ಲಿ ದೊಡ್ಡ ಪೆಟ್ಟು ಬಿದ್ದಿದೆ ಎಂದರು. ಪ್ರಧಾನಿ ಮೋದಿ ಅವರ ಆಡಳಿತ ಮೆಚ್ಚಿ ರಾಜಧಾನಿ ದಿಲ್ಲಿಯ ಜನರು 27 ವರ್ಷದ ಬಳಿಕ ಅವಕಾಶ ನೀಡಿದ್ದಾರೆ. ನಕಾರಾತ್ಮಕ ಆಡಳಿತ ನಡೆಸಿದ ಆಪ್‌ಗೆ ಸರಿಯಾಗಿ ಬುದ್ದಿ ಕಲಿಸಿದ್ದಾರೆ. ಭ್ರಷ್ಟಾಚಾರವನ್ನು ಆಧಾರ ಮಾಡಿಕೊಂಡು, ದಿಲ್ಲಿಯಲ್ಲಿ ಅರಾಜಕತೆ ಸೃಷ್ಟಿಸಿದವರಿಗೆ ಸರಿಯಾಗಿ ಮಾಡಿದ್ದಾರೆ ಎಂದು ಹರಿಹಾಯ್ದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ದೇಶಾದ್ಯಂತ ನಶಿಸಿ ಹೋಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇರುವ ಬಿಜೆಪಿಗೆ ಜಯ ದೊರೆಕಿದೆ. ಆದರೆ, ಕಾಂಗ್ರೆಸ್ ದಯನೀಯ ಸ್ಥಿತಿ ತಲುಪಿದ್ದು, ಇದು ಆ ಪಕ್ಷಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ತಿಳಿಸಿದರು.
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)