77
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದ್ದು, ಸರ್ಕಾರದ ವೈಫಲ್ಯದಿಂದ ಗೂಂಡಾ ರಾಜ್ಯ ನಿರ್ಮಾಣವಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ತಾವು ನೀಡಿದ ನಿಲುವಳಿ ಸೂಚನೆ ಮೇಲೆ ವಿಷಯ ಮಂಡಿಸಿದ ಆರ್. ಅಶೋಕ್, ರಾಜ್ಯದಲ್ಲಿ ಸರ್ಕಾರ ಮತ್ತು ಕಾನೂನು, ಸುವ್ಯವಸ್ಥೆ ನಡುವೆ ತಾಳ-ಮೇಳ ಇಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿ ನಾವೆಲ್ಲ ತಲೆತಗ್ಗಿಸುವಂಥ ಘಟನೆ ರಾಮನಗರದಲ್ಲಿ ನಡೆದಿದೆ. ಬಿಡದಿಯ ಟೊಯೋಟಾ ಸಂಸ್ಥೆಯ ಶೌಚಾಲಯದ ಗೋಡೆಯ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಮತ್ತು ಕನ್ನಡಿಗರನ್ನು ಅವಾಚ್ಯವಾಗಿ ನಿಂದಿಸುವ ಪದಗಳನ್ನು ಬರೆಯಲಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿ ಸರ್ಕಾರ ಈವರೆಗೆ ಯಾರನ್ನೂ ಬಂಧಿಸಿಲ್ಲ. ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಜನರು ಪ್ರಶ್ನಿಸುವಂತಾಗಿದೆ ಎಂದು ಹೇಳಿದರು.

