ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್‌ಡೈವ್ ಪ್ರಕರಣ ದಲ್ಲಿ ಕಾಂಗ್ರೆಸ್ ಕೈವಾಡವಿದೆ. ಇದನ್ನು ಬಿಜೆಪಿ ಮೇಲೆ ಹೊರಿಸುವ ಪ್ರಯತ್ನವನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರೇವಣ್ಣರನ್ನು ಕೂಡಲೇ ಬಂಧಿಸಿದ್ದರೂ ಚಾಲಕನನ್ನು ಮಾತ್ರ ಬಂಧಿಸಿಲ್ಲ ಎಸ್‌ಐಟಿ ಅಧಿಕಾರಿಗಳು ಪಕ್ಷಪಾತ ಧೋರಣೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದಂತೆ ಇಲ್ಲಿ ತಿಮಿಂಗಿಲವೇ ಇದೆ. ಅದನ್ನು ಬಡಿದು ತಿನ್ನಬೇಕಾ ಬೇಡವಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡರ ಕುಟುಂಬ ತೀರ್ಮಾನಿಸಲಿದೆ. ಆದರೆ, ಮಾಜಿ ಪ್ರಧಾನಿ ದೇವೇಗೌಡರ ಮೂಲಕ ಇಡೀ ಒಕ್ಕಲಿಗ ಸಮುದಾಯವನ್ನು ಅಪಮಾನಿಸಬೇಕಿತ್ತೇ ಎಂದು ಜನರು ಮಾತಾಡುತ್ತಿದ್ದಾರೆ. ಆದ್ದರಿಂದ ಬಿಜೆಪಿಯ ಮೇಲೆ ಆರೋಪ ತರುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ತನಿಖೆಯ ಪ್ರತಿ ಮಾಹಿತಿ ಮೊದಲು ಕಾಂಗ್ರೆಸ್ ನಾಯಕರಿಗೆ ತಲುಪುತ್ತಿದೆ. ಎಸ್‌ಐಟಿ ಅಧಿಕಾರಿಗಳು ಕಾಂಗ್ರೆಸ್ ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆನಂತರ ಯಾರೆಲ್ಲ ಬಂಧನಕ್ಕೊಳಗಾಗುತ್ತಾರೆ ಎಂದು ನೋಡಲಿ ಎಂದರು.