ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಿವೃತ್ತ ಕುಲಪತಿಯೊಬ್ಬರ ಅಧ್ಯಕ್ಷತೆಯಲ್ಲಿ ಸಮಗ್ರ ತನಿಖೆಗಾಗಿ ಸಮಿತಿ ರಚನೆಗೆ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ತಾಂತ್ರಿಕ ಶಿಕ್ಷಣ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸೇರಿದಂತೆ ವಿವಿಧ ತಜ್ಞರು ಈ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ ಎಂದು ತಿಳಿದುಬಂದಿದೆ.
ಕೆಇಎ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ಕೆಸಿಇಟಿ ಕೋಟಾದ ಅಡಿ ಇಂಜಿನಿಯರಿಂಗ್ ಸೀಟು ಹಂಚಿಕೆಯ ಎಲ್ಲ ಸುತ್ತಿನ ಆಯ್ಕೆ ಪಟ್ಟಿ ಪೂರ್ಣಗೊಂಡ ಬಳಿಕ 2,348 ಇಂಜಿನಿಯರಿಂಗ್ ಸೀಟ್ ಗಳನ್ನು ಕಾಲೇಜುಗಳಿಗೆ ಹಸ್ತಾಂತರಿಸಲಾಗಿತ್ತು. ಈ ಸೀಟ್‌ಗಳನ್ನು ಖಾಸಗಿ ಕಾಲೇಜುಗಳು ಮ್ಯಾನೇಜ್‌ಮೆಂಟ್ ಕೋಟಾದ ಅಡಿಯಲ್ಲಿ ಸುಮಾರು 50 ರಿಂದ 80 ಲಕ್ಷ ರೂ.ಗಳಿಗೆ ಮಾರಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದು ನೂರಾರು ಕೋಟಿ ಅಕ್ರಮ ಹಗರಣ ಎಂದು ಹೇಳಲಾಗುತ್ತಿದೆ. ಜತೆಗೆ ಉನ್ನತ ರ್ಯಾಂಕ್ ವಿದ್ಯಾರ್ಥಿಗಳು ಸೀಟು ಹಂಚಿಕೆ ಪ್ರಕ್ರಿಯೆಯ 2ನೇ ಸುತ್ತು ಪೂರ್ಣದ ನಂತರ ಉಳಿದ ಸೀಟುಗಳು ತಮಗೆ ಹಂಚಿಕೆಯಾಗಿರುವ ಕಾಲೇಜುಗಳಿಗೆ ಪ್ರವೇಶಗಳನ್ನು ಪಡೆಯದೆ ಸರ್ಕಾರಿ ಸೀಟಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿದಂತಾಗುತ್ತದೆ ಎಂಬ ಆರೋಪವೂ ಕೇಳಿ ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಮೂಲಕ ಹಂಚಿಕೆ ಮಾಡುವ ಸೀಟುಗಳು 2ನೇ ಸುತ್ತಿನ ನಂತರವೂ ಉಳಿದರೆ ಸರ್ಕಾರ ಮತ್ತು ಆಡಳಿತ ಮಂಡಳಿಯ ಒಪ್ಪಂದದಂತೆ ಅವುಗಳನ್ನು ಖಾಸಗಿ ಕಾಲೇಜುಗಳಿಗೆ ಬಿಟ್ಟು ಕೊಡಬೇಕು. ಈ ನಿಯಮಗಳನ್ನು ಬಳಸಿಕೊಳ್ಳುವ ಕೆಲ ಪ್ರಮುಖ ಕಾಲೇಜುಗಳು ಸಿಇಟಿ ಮೂಲಕ ಕಡಿಮೆ ಶುಲ್ಕಕ್ಕೆ ಬರುವ ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ತಡೆಯಲು ಸೀಟ್ ಬ್ಲಾಕಿಂಗ್ ದಂಧೆ ಮಾಡುತ್ತಿದೆ ಎನ್ನಲಾಗಿದೆ.