Home » ಇಂದಿನಿಂದ ಸೇವಾ ಪಾಕ್ಷಿಕ ಆಚರಣೆ
 

ಇಂದಿನಿಂದ ಸೇವಾ ಪಾಕ್ಷಿಕ ಆಚರಣೆ

ಮೋದಿ ಜನ್ಮದಿನಾಚರಣೆ

by Kundapur Xpress
Spread the love

ಬೆಂಗಳೂರು : ದೇಶದ ಪ್ರಧಾನಿ ನರೇಂದ್ರ ಮೋದಿ, ಪಂಡಿತ್  ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನ ಮತ್ತು ಗಾಂಧಿ ಜಯಂತಿ ಪ್ರಯುಕ್ತ ರಾಜ್ಯ ಬಿಜೆಪಿಯಿಂದ ಸೆ. 17ರಿಂದ ಸೇವಾ ಪಾಕ್ಷಿಕ ಆಚರಿಸಲಾಗುವುದು ಎಂದು ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸೆ.17ರಂದು ಪ್ರಧಾನಿ ಮೋದಿ ಜನ್ಮದಿನ, ಇದೇ 25ರಂದು ಪಂಡಿತ್ ದೀನದಯಾಳ್‌ ಉಪಾಧ್ಯಾಯ ಜನ್ಮದಿನ, ಅ.2ರಂದು ಗಾಂಧಿ ಜಯಂತಿ ಇದೆ. ಈ ಮೂವರು ಪ್ರಮುಖರ ಹೆಸರಿನಲ್ಲಿ ಜನರಿಗೆ ವಿವಿಧ ಸೇವೆಗಳನ್ನು ಒದಗಿಸಲು 15 ದಿನಗಳ ಕಾಲ ರಾಜ್ಯಾದ್ಯಂತ ಸೇವಾ ಪಾಕ್ಷಿಕ ನಡೆಸಲಾಗುವುದು ಎಂದರು.

ಜನ್ಮದಿನವನ್ನು ಕೇಕ್ ಕತ್ತರಿಸುವುದರ ಅಥವಾ ಊಟೋಪಚಾರದ ಆಚರಿಸುವುದರ ಬದಲಾಗಿ ಜನರಿಗೆ ಸೇವೆ ಮಾಡಲು ನಿರ್ಧರಿಸಿದ್ದೇವೆ. ಮಂಗಳವಾರ ರಾಜ್ಯದ ಎಲ್ಲ ಮಂಡಲ, ಜಿಲ್ಲಾ ಕೇಂದ್ರಗಳಲ್ಲಿ ರಕ್ತದಾನ ಶಿಬಿರದ ಮೂಲಕ ಸೇವಾ ಪಾಕ್ಷಿಕ ಆರಂಭವಾಗಲಿದೆ. ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಂದುವರೆಸುತ್ತೇವೆ. ಪ್ರತಿ ದಿನವೂ ಒಂದೊಂದು ಕಾರ್ಯಕ್ರಮ ನಡೆಸಲು ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ರಾಜ್ಯದಲ್ಲಿ ಉಸ್ತುವಾರಿ ನೇಮಿಸಿದ್ದು, ಜಿಲ್ಲೆ ಮತ್ತು ಮಂಡಲಗಳಲ್ಲಿ ತಲಾ ನಾಲ್ಕು ಜನರ ತಂಡ ಮಾಡಿದ್ದೇವೆ ಎಂದು ವಿವರ ನೀಡಿದರು.

ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಮೋದಿ ತಮ್ಮ ಆಡಳಿತಾವಧಿಯಲ್ಲಿ ಹಲವಾರು ಮಾನವೀಯ- ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಮಾಡಲು ಸೇವಾ ಪಾಕ್ಷಿಕ ಆಚರಣೆ ನಡೆಯುತ್ತಿದೆ. ಯುವ ಮೋರ್ಚಾದ ಅಡಿಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಸೆ.18ರಿಂದ 24ರವರೆಗೆ ಶಾಲೆ- ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಕ್ರೀಡಾಪಟುಗಳಿಗೆ ಸನ್ಮಾನ- ಸಹಾಯಕ ಸಲಕರಣೆ ವಿತರಣೆಯೂ ನಡೆಯಲಿದೆ. ಸೆ.23ರಂದು ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡುತ್ತೇವೆ. ಪ್ರಧಾನಿಯವರ ಜೀವನ ಸಾಧನೆ ಕುರಿತ ಚಿತ್ರಪ್ರದರ್ಶನಕ್ಕೆ ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ಚಾಲನೆ ಕೊಡಲಾಗುತ್ತದೆ ಎಂದರು. ವಿವಿಧ ಕಡೆಗಳಲ್ಲಿ ಮೋದಿ ಕುರಿತ ವಿಚಾರಗೋಷ್ಠಿಯನ್ನೂ ನಡೆಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಕಲೆ, ಚಿತ್ರಕಲಾ, ರಂಗೋಲಿ, ಭಾಷಣ, ಪ್ರಬಂಧ, ಮರಳುಶಿಲ್ಪ ಗ್ರಾಫಿಕ್ ವಿನ್ಯಾಸ ಸ್ಪರ್ಧೆ ಗಳನ್ನು ಹಮ್ಮಿಕೊಳ್ಳುತ್ತೇವೆ. ಸೆ.25ರಂದು ದೀನದಯಾಳ್ ಉಪಾಧ್ಯಾಯರಿಗೆ ಪುಷ್ಪನಮನ ಸ್ಮರಣೆ, ಅ.2ರಂದು ಮಹಾತ್ಮಗಾಂಧಿ- ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಂದು ಪ್ರತಿಮೆಗಳ ಸುತ್ತ ಸ್ವಚ್ಛತೆ ಮಾಡಲಿದ್ದೇವೆ ಎಂದರು.

   

Related Articles

error: Content is protected !!