ಬೆಂಗಳೂರು : ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರಗಳ ಆರೋಪ ಎದುರಿಸಿ ವಿಶೇಷ ತನಿಖಾ ದಳದ ಕಸ್ಟಡಿಯಲ್ಲಿ ರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕಸ್ಟಡಿ ಅವಧಿಯನ್ನು ಜೂನ್ 10ರವರೆಗೆ ವಿಸ್ತರಿಸಿ ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ನ್ಯಾಯಧೀಶರಾದ ಕೆ.ಎನ್.ಶಿವಕುಮಾರ್ ವಿಚಾರಣೆ ನಡೆಸಿದರು.
ಎಸ್ ಐ ಟಿ ಪರ ವಕೀಲ ಅಶೋಕ್ ನಾಯ್ಕ ವಾದ ಮಂಡಿಸಿ, ಆರೋಪಿಯು ಕೆಲ ವಿಷಯಗಳ ಬಗ್ಗೆ ಎಷ್ಟೇ ವಿಚಾರಣೆ ನಡೆಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೊಳೆನರಸಿಪುರದ ಮಹಿಳೆಯೊಬ್ಬರ ಲೈಂಗಿ ಕ ದೌರ್ಜನ್ಯ ಪ್ರಕರಣದ ವಿಚರಣೆ ಇನ್ನೂ ಬಾಕಿ ಇರುವ ಕಾರಣ ಮತ್ತಷ್ಟು ವಿಚಾರಣೆ ನಡೆಸಲು ಆರೋಪಿಯ ಕಸ್ಟಡಿ ವಿಸ್ತರಿಸುವಂತೆ ಮನವಿ ಮಾಡಿದರು. ಅಲ್ಲದೆ ಆರೋಪಿ ಹಾಗೂ ಸಂತ್ರಸ್ತೆಯನ್ನು ಎದುರು ಬದುರಾಗಿ ವಿಚಾರಣೆ ನಡೆಸಲು ಕೂಡ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ವಿಚಾರಣೆ ವೇಳೆ, ತಮಗೇನಾದರೂ ಎಸ್‌ಐಟಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆಯೇ ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಪ್ರಜ್ವಲ್ ಕಿರುಕುಳವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.