ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟರ್ ಹಾಕಿದ್ದ ಘಟನೆಯಿಂದ ಪುಂಡರ ಗುಂಪು ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲುಗಳಿಂದ ದಾಳಿ ನಡೆಸಿದ್ದರಿಂದ ಉದ್ವಿಗ್ನಗೊಂಡಿದ್ದ ಮೈಸೂರಿನ ಉದಯಗಿರಿ ಪ್ರದೇಶ ಇದೀಗ ಸಹಜ ಸ್ಥಿತಿಗೆ ಮರಳಿದೆ.
ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲಿನ ದಾಳಿ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದ್ದು ತನಿಖೆಯನ್ನು ಚರುಕುಗೊಳಿಸಿರುವ ಪೊಲೀಸರು ಠಾಣೆ ಮೇಲೆ ಕಲ್ಲು ತೂರಿದ 8 ಮಂದಿಯನ್ನು ಬಂಧಿಸಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಾಂತಿನಗರದ ನಿವಾಸಿಗಳಾದ ಸುಹೇಲ್, ರಹೀಲ್ ಪಾಷಾ, ಅಯಾನ್, ಗೌಸಿಯಾ ನಗರದ ನಿವಾಸಿಗಳಾದ ಸೈಯದ್ ಸಾದಿಕ್, ಶೋಹೇಬ್ ಪಾಷಾ, ಸತ್ಯ ನಗರದ ಏಜಾಜ್, ರಾಜೀವನಗರದ ಅರ್ಬಾಜ್ ಷರೀಫ್, ಸಾದಿಕ್ ಪಾಷಾ ಬಂಧಿತ ಆರೋಪಿಗಳು.
ಘಟನೆಗೆ ಸಂಬಂಧಿಸಿದಂತೆ ಸಿಸಿ ಟಿವಿ ಫೋಟೇಜ್ ಆಧರಿಸಿ ಈಗಾಗಲೇ 60 ಮಂದಿ ಪುಂಡರ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ದಿಲ್ಲಿ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಆರೋಪಿ ಡೈ ಫೂಟ್ಸ್ ಅಂಗಡಿ ಮಾಲೀಕ ಸುರೇಶ್‌ನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಬಿಎನ್ ಎಸ್ 299ನೇ ಸೆಕ್ಷನ್ ಪ್ರಕಾರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯತ್ನ, ಸಮಾಜದಲ್ಲಿ ಅಶಾಂತಿ ಮೂಡಿಸುವ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲುತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)