Home » ಹಿಂದೂ ವಿರೋಧಿ ನೀತಿ ಖಂಡನೀಯ
 

ಹಿಂದೂ ವಿರೋಧಿ ನೀತಿ ಖಂಡನೀಯ

: ವೀಣಾ ಎಸ್. ಶೆಟ್ಟಿ

by Kundapur Xpress
Spread the love

ಉಡುಪಿ : ಸದಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯ್ದೆಗೆ ಈ ಹಿಂದೆ ಬಿಜೆಪಿ ಸರಕಾರ ತಂದಿರುವ ತಿದ್ದುಪಡಿಯನ್ನು ವಾಪಾಸು ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದ್ದಾರೆ.

ಈಗಾಗಲೇ ಸಮಾಜದಲ್ಲಿ ಲವ್ ಜಿಹಾದ್ ಮತ್ತು ಆಮಿಷದ ಮುಖಾಂತರ ಮೋಸದ ಮತಾಂತರ ಅವ್ಯಾಹತವಾಗಿ ನಡೆಯುತ್ತಿದ್ದು ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಯನ್ನು ವಾಪಾಸು ಪಡೆಯುವ ಮೂಲಕ ಮತಾಂತರವನ್ನೇ ಕಾಯಕವನ್ನಾಗಿಸಿಕೊಂಡಿರುವ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿ ಸ್ವಾತಂತ್ರ್ಯ ಹೋರಾಟಗಾರ ಮಹಾನ್ ಪುರುಷರಾದ ವೀರ ಸಾವರ್ಕರ್, ಹೆಡಗೇವಾರ್ ರವರ ಜೀವನಾದರ್ಶವನ್ನು ಸಾರುವ ಪಠ್ಯವನ್ನು ಕೈಬಿಟ್ಟಿರುವುದು ಒಂದೇ ವರ್ಗದ ಓಲೈಕೆಯ ರಾಜಕಾರಣವಾಗಿದೆ. ಆದರೂ ಈ ಪ್ರಕ್ರಿಯೆಯಿಂದ ಇಂತಹ ಮಹಾನ್ ಪುರುಷರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಅರಿತುಕೊಳ್ಳಲು ಮುಂದಾಗುವುದು ಖಂಡಿತ ಎಂದು ಅವರು ತಿಳಿಸಿದ್ದಾರೆ.

ಈ ಎಲ್ಲಾ ವೈಫಲ್ಯಗಳ ಹಿನ್ನೆಲೆಯಲ್ಲಿ ಮಾತು ತಪ್ಪಿದ ಕಾಂಗ್ರೆಸ್ ಸರಕಾರ ಉಚಿತಗಳ ಗ್ಯಾರಂಟಿಗಳನ್ನೂ ಪೂರೈಸದೆ, ಅಭಿವೃದ್ಧಿಯ ಗೊಡವೆಗೂ ಹೋಗದೆ, ರಾಜ್ಯವನ್ನು ದಿವಾಳಿಯ ಅಂಚಿನತ್ತ ಕೊಂಡೊಯ್ಯುವುದು ನಿಶ್ಚಿತ ಎಂದು ವೀಣಾ ಎಸ್. ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

   

Related Articles

error: Content is protected !!