ಹೊಸದಿಲ್ಲಿ : ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ್ದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ (ಜಾತಿ ಜನಗಣತಿ) ವರದಿಯನ್ನು ಸ್ವೀಕರಿಸಿರುವ ರಾಜ್ಯ ಸರ್ಕಾರ, ವರದಿಯ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಜ್ಯದಲ್ಲಿ ಜಾತಿ ಮರು ಸಮೀಕ್ಷೆ ಕೈಗೊಳ್ಳುವುದಾಗಿ ಪ್ರಕಟಿಸಿದೆ.
ಹೊಸದಿಲ್ಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜತೆಗೆ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚಿಸಿದ ಪಕ್ಷದ ವರಿಷ್ಠರು ಮರು ಸಮೀಕ್ಷೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಜೂ.12 ರಂದು ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಸುಮಾರು 186 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಜಾತಿಗಣತಿ ವರದಿಯನ್ನು ಸರ್ಕಾರ ತಾತ್ವಿಕವಾಗಿ ಒಪ್ಪಿದ್ದು, ದತ್ತಾಂಶ ಹಳೆಯದಾಗಿರುವುದರಿಂದ ಮರು ಸಮೀಕ್ಷೆ ಕೈಗೊಳ್ಳುವುದಾಗಿ ಹೇಳಿದೆ. ಜಾತಿಗಣತಿ ಜಾರಿಗೆ ಒಬಿಸಿ ಮತ್ತು ದಲಿತ ಸಚಿವರ ಬೆಂಬಲ ಇದ್ದರೂ ಸಹ ಹೈಕಮಾಂಡ್ ಆದೇಶದ ಮೇರೆಗೆ ಮತ್ತೊಮ್ಮೆ ಸಮೀಕ್ಷೆ ಕೈಗೊಳ್ಳಲು ಸರ್ಕಾರ ಒಪ್ಪಿದೆ

