ವಯನಾಡ್ : 400ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದ ಭೂಕುಸಿತ ದುರಂತಕ್ಕೆ ಸಾಕ್ಷಿಯಾದ ವಯನಾಡ್ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಲ್ಲದೆ, ಸಂತ್ರಸ್ತರ ನೋವು ಆಲಿಸಿ ಅವರಿಗೆ ಧೈರ್ಯ ತುಂಬಿದ್ದಾರೆ. ‘ಸಾವಿರಾರು ಜನರ ಕನಸನ್ನು ಛಿದ್ರಗೊಳಿಸಿದ ಅಸಾಮಾನ್ಯ ದುರಂತ ಇದಾಗಿದೆ. ಇಂಥ ಕಷ್ಟಕರ ಸಂದರ್ಭದಲ್ಲಿ ಪರಿಹಾರ, ಪುನರ್ವಸತಿಗೆ ಕೇಂದ್ರ ಸರ್ಕಾರ ಸಂಪೂರ್ಣ ಪ್ರಯತ್ನ ಮಾಡಲಿದೆ ಎಂದು ಘೋಷಿಸಿದ್ದಾರೆ.
ಶನಿವಾರ ದಿಲ್ಲಿಯಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ, ಮೊದಲು ವಯನಾಡ್‌ನಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಏರಿ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ದುರ್ಘಟನೆ ನಡೆದ ಚೂರಲ್ಮಲೆಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿ ಅನಾಹುತದ ತೀವ್ರತೆ ಪರಿಶೀಲಿಸಿದರು. ನಿರಾಶ್ರಿತರ ಶಿಬಿರಕ್ಕೆ ತೆರಳಿ ಜನರ ಅಹವಾಲು ಆಲಿಸಿ ಧೈರ್ಯ ತುಂಬಿದರು. ಇದೇ ವೇಳೆ, ಸೇನೆ ನಿರ್ಮಿಸಿರುವ 190 ಅಡಿ ಉದ್ದದ ಸೇತುವೆ ಮೇಲೆ ಅಡ್ಡಾಡಿ ಭೂಕುಸಿತದಿಂದಾಗಿ. ಎಲ್ಲೆಂದರಲ್ಲಿ ಬಿದ್ದಿರುವ ಬಂಡೆಗಳು ಸೇರಿ ಅವಶೇಷಗಳನ್ನು ಗಮನಿಸಿದರು
ಬಳಿಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹಾಗೂ ಪ್ರಮುಖರ ಜತೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ಈ ಅನಾಹುತ ಸಾಮಾನ್ಯವಲ್ಲ. ಇದು ಹಲವಾರು ಕುಟುಂಬಗಳ ಕನಸುಗಳನ್ನು ಛಿದ್ರಗೊಳಿಸಿದೆ. ಈ ದುರಂತವನ್ನು ಎದುರಿಸಿದ ಸಂತ್ರಸ್ತರನ್ನು ನಾನು ಖುದ್ದು ನೋಡಿದ್ದೇನೆ’ ಎಂದು ಬೇಸರಿಸಿದರು