Home » ದೃಢತೆಯ ಶಕ್ತಿ
 

ದೃಢತೆಯ ಶಕ್ತಿ

by Kundapur Xpress
Spread the love

‘ದುರ್ಬಲರಿಗೆ ಎಂದೂ ದೇವರು ಸಿಕ್ಕುವುದಿಲ್ಲ. ಆದುದರಿಂದ ನೀವೆಂದೂ ದುರ್ಬಲರಾಗಬೇಡಿ. ನೀವು ದೃಢಕಾಯರಾಗಿರಬೇಕು. ನಿಮ್ಮಲ್ಲಿ ಅನಂತ ಶಕ್ತಿ ಇದೆ, ಇಲ್ಲದೆ ಇದ್ದರೆ ನೀವು ಯಾವುದನ್ನಾದರೂ ಹೇಗೆ ಜಯಿಸುತ್ತೀರಿ? ದೇವರ ಹತ್ತಿರ ಹೇಗೆ ಬರುತ್ತೀರಿ?’ ಇದು ಸ್ವಾಮಿ ವಿವೇಕಾನಂದರು ನಮ್ಮನ್ನು ಕೇಳುವ ಪ್ರಶ್ನೆ. ‘ಪ್ರತಿಯೊಬ್ಬರಲ್ಲಿ ಅಂತರ್ಗತವಾಗಿ ಒಂದು ದೈವಿಶಕ್ತಿ ಇದೆ ಮತ್ತು ಅದು ಅವರನ್ನು ದೇವರ ಬಳಿ ಕೊಂಡೊಯ್ಯುವ, ಸಾಕ್ಷಾತ್ಕಾರವನ್ನು ಸಾಧಿಸುವ ಶಕ್ತಿಯನ್ನು ಕೊಡುತ್ತದೆ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಇಂತಹ ಒಂದು ವಿಶ್ವಾಸ ಅವರಲ್ಲಿ ಇದ್ದುದರಿಂದಲೇ ಅವರು ಪ್ರತಿಯೊಬ್ಬ ವ್ಯಕ್ತಿಯನ್ನು ಪರುಷ-ಸಿಂಹರನ್ನಾಗಿ ಕಾಣುತ್ತಿದ್ದರು. ಸಿಂಹದ ಗಾಂಭೀರ್ಯದಲ್ಲಿ ದೃಢತೆ ಇದೆ. ಉತ್ಸಾಹವಿದೆ. ಆದರೆ ಉದ್ವೇಗವಿಲ್ಲ. ನಿಜಕ್ಕಾದರೆ ಉದ್ವೇಗ ಇಲ್ಲದಿರುವುದೇ ಸಮತ್ವದ ಸೂಚಕ. ಗಾಂಭೀರ್ಯದ ಪ್ರತಿಫಲನ. ನಿರುದ್ವಿಗ್ನಭಾವವೇ ನಮ್ಮಲ್ಲಿ ಸಮತ್ವವನ್ನು ಕಾಪಾಡುವ ಶಕ್ತಿಯನ್ನು ಉಂಟುಮಾಡುತ್ತುದೆ. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಮನಸ್ಸಿನ ಸಂತುಲನವನು ಕಾಯ್ದುಕೊಳ್ಳುವುದು ನಿಜಕ್ಕೂ ಒಂದು ಕಲೆ. ಅದನ್ನು ಕರಗತ ಮಾಡಿಕೊಳ್ಳುವುದರಲ್ಲಿ ಬದುಕಿನ ಆನಂದವಿದೆ. ಆ ಆನಂದದಲ್ಲಿ ದೇವರನ್ನು ಸದಾ ನೆನೆಯುವುದು ಸಾಧ್ಯ. ನಾವು ಎಂದೂ ಮಿತಿ ಮೀರಿದ ಸಂತೋಷವನ್ನೂ ತಾಳಬಾರದು, ಮಿತಿ ಮೀರಿದ ದುಃಖವನ್ನು ಅನುಭವಿಸಬಾರದು. ಒಂದು ಅತಿಯಿಂದ ಇನ್ನೊಂದು ಅತಿಗೆ ಧಾವಿಸುವ ನಮ್ಮ ಸ್ವಭಾವವನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಮನಸ್ಸಿನ ಶಾಂತಿ ನಷ್ಟವಾಗದು. ವಿಶಿಷ್ಟಾದ್ವೈತ ಪ್ರತಿಪಾದಕ ಶ್ರೀ ರಾಮಾನುಜಾಚಾರ್ಯರು ಭಕ್ತಿಯೋಗಕ್ಕೆ ಸೂಚಿಸುವ ಸಾಧನಗಳಲ್ಲಿ ಈ ಸಮತ್ವವೂ ಒಂದಾಗಿದೆ. ಕುರುಕ್ಷೇತ್ರದಲ್ಲಿ ಯುದ್ಧ ಮಾಡಲಗದೆ ಮಾನಸಿಕ ತೊಳಲಾಟಕ್ಕೆ ಗುರಿಯಾದ ಅರ್ಜುನನಲ್ಲಿ ಶ್ರೀಕೃಷ್ಣನು ಗೀತೋಪದೇಶದ ಮೂಲಕ ಉಂಟು ಮಾಡಿದ್ದು ಸಮತ್ವದ ಭಾವವೇ ಆಗಿದೆ.

   

Related Articles

error: Content is protected !!