Home » ಹಣ ವರ್ಗಾವಣೆ ಖಂಡನೀಯ-ದಿನಕರ ಬಾಬು
 

ಹಣ ವರ್ಗಾವಣೆ ಖಂಡನೀಯ-ದಿನಕರ ಬಾಬು

by Kundapur Xpress
Spread the love

ಉಡುಪಿ : ಅಧಿಕಾರಕ್ಕೆ ಏರಲೇಬೇಕೆಂಬ ಹಪಾಹಪಿಯಿಂದ ಕಾಂಗ್ರೆಸ್ ಪಕ್ಷ ಘೋಷಿಸಿದ್ದ 5 ಉಚಿತಗಳ ಗ್ಯಾರಂಟಿಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿದ್ದು, ಇದೀಗ ಎಸ್ಸಿ ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಸುಮಾರು 11,000 ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡುವ ನಿರ್ಧಾರ ಕೈಗೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮಹಾ ಮೋಸ ಎಸಗಿರುವುದನ್ನು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು ತೀವ್ರವಾಗಿ ಖಂಡಿಸಿದರು. ಅವರು ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನತೆಯನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಯಾವುದೇ ಗ್ಯಾರಂಟಿಗಳನ್ನೂ ಯಥಾವತ್ತಾಗಿ ಜಾರಿಗೊಳಿಸದೆ, ಬೆಲೆ ಏರಿಕೆಯ 6ನೇ ಗ್ಯಾರಂಟಿ ನೀಡುವ ಜೊತೆಗೆ ದಲಿತರ ಸಹಿತ ರಾಜ್ಯದ ಸಮಸ್ತ ಜನತೆಗೆ ದ್ರೋಹ ಎಸಗಿದೆ ಎಂದರು

ದಲಿತರಿಗೆ ವಿಶೇಷ ಯೋಜನೆ ರೂಪಿಸಿ ಸಾವಿರಾರು ಕೋಟಿ ರೂಪಾಯಿ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾ, ಅಂತಹ ಯೋಜನೆಯ ಹಣವನ್ನು ಮೆಟ್ರೋ ರೈಲು, ಕೆರೆಗಳ ಹೂಳೆತ್ತಲು ಮತ್ತು PWD ರಸ್ತೆ ನಿರ್ಮಿಸಲು ನೀಡಿ ದಲಿತರನ್ನು ವಂಚಿಸಿದ್ದಾರೆ. SCSP/TSP ಅಡಿಯಲ್ಲಿ 7ಡಿ ಎಂಬ ಕಾನೂನನ್ನಿಟ್ಟು ಹಿಂದಿನ ಅವಧಿಯಲ್ಲಿ ವಂಚಿಸಿದ ಸಿದ್ದರಾಮಯ್ಯ ನಂತರ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು ಎಂದು ದೂರಿದರು.

ಹಿಂದಿನ ಬಿಜೆಪಿ ಸರ್ಕಾರ 7ಡಿ ಕಾನೂನನ್ನು ವಜಾಗೊಳಿಸಿ, ದಲಿತರ SCSP/TSP ಹಣ ದಲಿತರ ಸರ್ವತೋಮುಖ ಅಭಿವೃದ್ಧಿಗೆ ಮಾತ್ರ ವಿನಿಯೋಗವಾಗಬೇಕೆಂದು ಬಜೆಟ್ ನಲ್ಲಿ ಮಂಡಿಸಿರುವುದನ್ನು ಸಹಿಸಲಾರದೆ, ಇಂದಿನ ಕಾಂಗ್ರೆಸ್ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಮೀಸಲಿಡಲಾಗಿರುವ ಹಣದಲ್ಲಿ ರೂಪಾಯಿ 11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವ ನಿರ್ಣಯ ಕೈಗೊಂಡಿರುವುದು ಕಪಟ ಅಹಿಂದ ಜಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಎಸ್ಸಿ ಎಸ್ಟಿ ಸಮುದಾಯಗಳಿಗೆ ಮಾಡಿರುವ ಅಕ್ಷಮ್ಯ ದ್ರೋಹವಾಗಿದೆ ಎಂದರು

ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜೆ, ಉಪಾಧ್ಯಕ್ಷ ಆನಂದ ಮಟಪಾಡಿ, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸದಾನಂದ ಕೈಪುಂಜಾಲು, ಎಸ್ಸಿ ಮೋರ್ಚಾ ಬೈಂದೂರು ಮಂಡಲಾಧ್ಯಕ್ಷ ಚಂದ್ರ ಪಂಚವಟಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು

   

Related Articles

error: Content is protected !!