ದೇಹವನ್ನು ಮನಸ್ಸಿನಿಂದ, ಮನಸ್ಸನ್ನು ಬುದ್ಧಿಯಿಂದ, ಬುದ್ಧಿಯನ್ನು ಆತ್ಮಬಲದಿಂದ ಗೆಲ್ಲಬೇಕು ಎಂದು ಗೀತೆಯಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಹೇಳುವ ಮಾತುಗಳಲ್ಲಿ ಆನಂದಮಯ ಬದುಕಿನ ರಹಸ್ಯವಿದೆ. ದೇಹಕ್ಕೆ ನಾವು ಕೊಡುವ ಯಾವತ್ತೂ ಸುಖ ಅತ್ಯಂತ ಕ್ಷಣಿಕವಾದುದು. ಅದು ಹೆಚ್ಚೆಚ್ಚು ಸುಖ ಪಟ್ಟ ಹಾಗೆ ಜೀರ್ಣವಾಗುತ್ತಾ ಹೋಗುವುದಲ್ಲದೆ ನಾನಾ ಬಗೆಯ ರೋಗಗಳಿಗೂ ತುತ್ತಾಗುವುದು. ಆದುದರಿಂದ ಅದಕ್ಕೆ ಕೊಡಬಹುದಾದ ಸುಖ ಯಾವತ್ತೂ ಒಂದು ಮಿತಿಯೊಳಗೇ ಇರುವುದು ಅಗತ್ಯ. ಈ ಕಾರಣದಿಂದ ದೇಹ ಅತ್ಯಂತ ಕೆಳಸ್ತರದ ಉಪಕರಣ. ಚೆನ್ನಾಗಿ ದುಡಿಸಿ ಕೊಂಡರಂತೂ ಇಡಿಯ ಲೋಕೋದ್ಧಾರಕ್ಕೆ ಪೂರಕವಾದ ಸಾಧನವೂ ಹೌದು. ಆದರೂ ದೇಹಕ್ಕಿಂತ ಮನಸ್ಸು ಶ್ರೇಷ್ಠವಾದದ್ದು. ದೇಹದ ಕಾಮನೆಗಳನ್ನು ನಿಯಂತ್ರಿಸುವ ಶಕ್ತಿ ಮನಸ್ಸಿನಲ್ಲಿದೆ. ನಿಜಕ್ಕಾದರೆ ನಾವೇ ದೇಹವಲ್ಲ. ದೇಹವು ಅತ್ಮನ ಪರಿಕರ. ಆತ್ಮನ ಆಜ್ಞಾನುಸಾರ ವರ್ತಿಸುವ ಶಿಸ್ತಿನ ಸೈನಿಕ. ದೇಹವನ್ನು ಒಂದು ರಥಕ್ಕೆ ಹೋಲಿಸಿದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಈ ರಥದ ಆರು ಕುದುರೆಗಳು. ಈ ಕುದುರೆಗಳನ್ನು ಸರಿಯಾಗಿ ನಿಯಂತ್ರಿಸಿದರೆ ಮಾತ್ರವೇ ರಥವನ್ನು ನಾವು ಇಷ್ಟಪಡುವ ಕಡೆಗೆ ನಿರ್ವಿಘ್ನವಾಗಿ ಕೊಂಡೊಯ್ಯಬಹುದು. ಹಾಗೆ ಮಾಡಲು ಮನಸ್ಸನ್ನು ನಾವು ಲಗಾಮಾಗಿ ಪರಿಗ್ರಹಿಸಬೇಕು. ಸರಿ-ತಪ್ಪುಗಳನ್ನು ವಿವೇಚಿಸುವ ಸಾಮಥ್ರ್ಯವಿರುವ ಬುದ್ಧಿಯನ್ನು ಈ ರಥದ ಸಾರಥಿಯನ್ನಾಗಿ ಕೂಡಿಸಿ ಆತನ ಕೈಯಲ್ಲಿ ಮನಸ್ಸೆಂಬ ಲಗಾಮನ್ನು ಕೊಡಬೇಕು. ಆತ್ಮನು ಈ ರಥದಲ್ಲಿ ವಿರಾಜಮಾನವಾಗಿರುವ ದೇವನೇ ಆಗಿರುವನು. ಹೀಗಿರುವಾಗ ಮನಸ್ಸನ್ನು ಅತ್ಯಂತ ಪ್ರಫುಲ್ಲವಾಗಿರಿಸಿಕೊಂಡರೆ ಮಾತ್ರವೇ ಬದುಕೆಂಬ ಪಯಣದಲ್ಲಿ ನಮ್ಮ ರಥವು ನಿರ್ವಿಘ್ನವಾಗಿ ಸಾಗುವುದು. ಮೋಕ್ಷವೆಂಬ ಗುರಿಯನ್ನು ಖಚಿತವಾಗಿ ತಲುಪುವುದು.