ಮನುಷ್ಯನಲ್ಲಿ ಮೂಲಭೂತವಾಗಿರುವ ಕಾಮನೆಗಳೇ ಆತನ ಮೊದಲ ವೈರಿ. ಕಾಮನೆಗಳನ್ನು ನೂರ್ಮಡಿಗೊಳಿಸುವ ಆಸೆಬುರುಕ ಆಧುನಿಕ ಪ್ರಪಂಚದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಹಾಗಾಗಿ ಈ ಯುಗವನ್ನು ಏಚ್ ಆಫ್ ಡಿಸಾಯರ್ ಎಂದು ಕರೆಯುತ್ತಾರೆ. ನಮಗೆ ನಮ್ಮ ದೇಹವು ಆಸೆಗಳನ್ನು ಪೂರೈಸಿಕೊಳ್ಳುವ ಸಾಧನವಾಗಿ ಮಾತ್ರವೇ ಕಾಣುತ್ತಿದೆ. ಹಾಗಾಗಿಯೇ ಸುಖಭೋಗದ ಲಾಲಸೆಯಲ್ಲಿ ನಿರಂತರ ಯೌವನಕ್ಕಾಗಿ ಹಪಹಪಿಸುವ ಪ್ರವೃತ್ತಿ ನಮ್ಮದು. ಉಕ್ಕಿ ಬರುವ ಕಡಲ ತೆರೆ, ಸೊಕ್ಕಿ ಬರುವ ಯೌವನ, ಜಾರಿ ಹೋಗುವ ಸಮಯವನ್ನು ಯಾರಾದರೂ ತಡೆಹಿಡಿಯಲು ಸಾಧ್ಯವೇ? ಆದರೂ ದೇಹ ಸೌಂದರ್ಯಕ್ಕೆ ಮರುಳಾಗುವ ನಾವು ಆ ಯಃಕಶ್ಚಿತ್ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪಡುವ ಪಾಡು ದೇವರಿಗೇ ಪ್ರೀತಿ! ನಿಜಕ್ಕಾದರೆ ದೇಹದ ಆರೋಗ್ಯ ಮುಖ್ಯವೇ ವಿನಾ ಸೌಂದರ್ಯವಲ್ಲ. ಇಷ್ಟಕ್ಕೂ ಸೌಂದರ್ಯವೆನ್ನುವುದು ಅದನ್ನು ಕಾಣುವ ಕಣ್ಣುಗಳಲ್ಲಿ ಇದೆಯೇ ಹೊರತು ಆ ವಸ್ತುವಿನಲ್ಲಿ ಅಂತರ್ಗತವಾಗಿಲ್ಲ! ಆದರೂ ನಾವು ಸೌಂದರ್ಯದ ಖಣಿಯಾಗಿರಬೇಕೆಂದು ಹಂಬಲಿಸುತ್ತೇವೆ. ಹಾಗಾಗಿ ದೇಹ ಸೌಂದರ್ಯದ ದುರಭಿಮಾನವೇ ನಮ್ಮನ್ನು ವಾಸ್ತವದಿಂದ ದೂರಮಾಡುತ್ತದೆ. ಬದುಕಿಗೆ ಮುಳುವಾಗುತ್ತದೆ. ಶಾಂತಿ-ಸಮಾಧಾನದ ಬಾಳನ್ನು ನಡೆಸಲು ದೇಹ ಪ್ರಜ್ಞೆಯನ್ನು ಮೆಟ್ಟಿ ನಿಲ್ಲುವುದು ಅಗತ್ಯ. ಹಾಗೆ ಮಾಡುವುದರಿಂದ ದುರಹಂಕಾರವನ್ನು ಗೆಲ್ಲಲು ಸಾಧ್ಯ. ದೇಹ ಸೌಂದರ್ಯಕ್ಕೆ ಮಹತ್ವ ಕೊಟ್ಟಷ್ಟೂ ಭೋಗ ಲಾಲಸೆಯೇ ಬದುಕಿನಲ್ಲಿ ಪ್ರಧಾನವಾಗುತ್ತದೆ. ದೇಹ-ಮನಸ್ಸು ಕಾಮನೆಗಳ ಉಗ್ರಾಣವಾಗುತ್ತದೆ. ಅದರ ಪರಿಣಾಮವಾಗಿ ಹೃದಯ ದೇಗುಲದ ಬಾಗಿಲುಗಳು ಮುಚ್ಚಲ್ಪಟ್ಟು ಆತ್ಮರೂಪಿಯಾದ ದೇವರನ್ನು ನಾವು ಕಾಣಲು ಅಸಾಧ್ಯವಾಗುತ್ತದೆ.