Home » ಸುಖದ ಬೆನ್ನುಹತ್ತಿ…….
 

ಸುಖದ ಬೆನ್ನುಹತ್ತಿ…….

by Kundapur Xpress
Spread the love

ಸುಖದ ಬೆನ್ನು ಹತ್ತಿರುವ ನಮ್ಮಲ್ಲಿ ಸಹಜವಾಗಿ ಅನೇಕ ಬಗೆಯ ದೌರ್ಬಲ್ಯ, ಅಜ್ಞಾನ, ಪೂರ್ವಗ್ರಹ ಮನೆ ಮಾಡಿಕೊಂಡಿವೆ. ಬದುಕಿನಲ್ಲಿ ಸುಖವನ್ನು ಬಿಟ್ಟು ಬೇರೇನನ್ನೂ ಬಯಸದಿರುವ ಮನೋಭಾವವನ್ನು ನಾವು ಬೆಳೆಸಿಕೊಂಡಿದ್ದೇವೆ. ಹಾಗಾಗಿ ಬದುಕಿನಲ್ಲಿ ಸಣ್ಣ ಪುಟ್ಟ ಕಷ್ಟಗಳು ಎದುರಾದಾಗಲೂ ಬಹಳ ಬೇಗನೆ ಹತಾಶರಾಗಿ ಬಿಡುತ್ತೇವೆ. ಎಷ್ಟೆಂದರೆ ಕೆಲವರು ಮನಃಸ್ಥೈರ್ಯವನ್ನೂ ಕಳೆದುಕೊಂಡು ‘ಪಲಾಯನ ಸೂತ್ರ’ವನ್ನು ಕೈಗೆತ್ತಿಕೊಳ್ಳುತ್ತಾರೆ. ಹಾಗಾಗಿ ಬದುಕಿನಲ್ಲಿ ಕಷ್ಟಕಾಲ ಒದಗಿದಾಗ ಸಹಜವಾಗಿಯೇ ನಾವು ದೇವರನ್ನು ದೂರುತ್ತೇವೆ. ಸಿಟ್ಟು ಮತ್ತು ಹತಾಶೆಯ ತೀವ್ರತೆಯಲ್ಲಿ ಆತನ ಅಸ್ತಿತ್ವವನ್ನೇ ಪ್ರಶ್ನಿಸುತ್ತೇವೆ. ‘ದೇವರೇ ಇಲ್ಲ, ಇದ್ದಿದ್ದರೆ ಆತನು ನನಗೆ ಇಷ್ಟು ಕಷ್ಟಗಳನ್ನು ಕೊಡುತ್ತಿರಲಿಲ್ಲ; ಆತ ಬರೇ ಕಲ್ಲು, ಆತನ ಹೃದಯವೂ ಕಲ್ಲು’ ಎಂದು ನಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಈ ಬಗೆಯ ಸಿಟ್ಟು, ಹತಾಶೆ, ಅಕ್ರೋಶದಿಂದ ದೇವರು ಸಿಟ್ಟಿಗೇಳುವುದುಂಟೆ? ಇಲ್ಲ! ಆತನಿಗೆ ತನ್ನ ಭಕ್ತರು ತನ್ನ ಮೇಲೆ ಸಿಟ್ಟುಗೊಂಡು ನಿಂದಿಸಿದರೂ ಸಂತೋಷವೇ, ಭಜಿಸಿ, ಪ್ರೀತಿ ಮಾಡಿದರೂ ಸಂತೋಷವೇ? ಮಗುವಿನ ತಂಟೆ, ಹಟ ಮಿತಿಮೀರಿದಾಗ, ತಾಯಿಯಾದವಳು ಆ ಮಗುವಿಗೆ ಶಿಕ್ಷೆಕೊಟ್ಟರೆ ಆಕೆಗೆ ಮಗುವಿನ ಮೇಲೆ ದ್ವೇಷವಿದೆ ಎಂದು ಹೇಳಿದರೆ ಸರಿಯಾದೀತೆ? ಶಿಕ್ಷೆಯನ್ನು ಅನುಭವಿಸುವ ಮೂಲಕ ಮಗುವು ತನ್ನ ತಂಟೆ, ಹಟವನ್ನು ಕೊಂಚ ಕಡಿಮೆ ಮಾಡಿ ವಿಧೇಯತೆ ಹಾಗೂ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕೆಂದು ತಾನೇ ಆ ತಾಯಿಯ ಉದ್ದೇಶ? ಬದುಕಿನಲ್ಲಿ ಕಷ್ಟಗಳು ಬಂದಾಗ ದೇವರನ್ನು ನೆನೆಯುತ್ತಾ ಅವುಗಳನ್ನು ಸಹನೆಯಿಂದ ಅನುಭವಿಸಬೇಕೇ ವಿನಾ ದೇವರನ್ನು ಹೀನಾಯಿಸಿ ಆತನ ಅಸ್ತಿತ್ವವನ್ನು ಪ್ರಶ್ನಿಸುವುದಲ್ಲ. ದೇವರಲ್ಲಿ ನಮಗಿರುವ ವಿಶ್ವಾಸ ಎಷ್ಟೆನ್ನುವುದು ಬಯಲಾಗುವ ಸಂದರ್ಭವೇ ಇದು

   

Related Articles

error: Content is protected !!