ಸಾಕಷ್ಟು ಸಂಪತ್ತಿರುವವರನ್ನು ನಾವು ಶ್ರೀಮಂತರೆಂದು ತಿಳಿಯುವುದು ಸಹಜವೇ. ಐಹಿಕ ಸುಖಭೋಗಗಳನ್ನು ಅನುಭವಿಸುವ ಸಕಲ ಸೌಕರ್ಯಗಳನ್ನು ಹೊಂದಿರುವ ಅಂತಹವರ ಬಳಿ ಸಾಕಷ್ಟು ಧನ-ಕನಕ, ಕಾರು, ಬಂಗಲೆ, ಕೆಲಸದಾಳುಗಳು ಇರುವುದರಿಂದ ಅವರು ಸಂಪತ್ತಿನಿಂದ ಸಿರಿವಂತರೇ ಆಗಿರುವರು. ಆದರೆ ಅಂತಹ ಅನೇಕರಿಗೆ ಮೂಲಭೂತವಾಗಿ ತಮ್ಮ ಸಂಪತ್ತಿನ ಮೇಲೆ ಅತ್ಯಧಿಕ ಪ್ರೀತಿ ಇರುವುದೇ ವಿನಾ ಅದನ್ನು ಕರುಣಿಸಿದ ದೇವರ ಮೇಲೆ ಇರುವುದು ಅಷ್ಟಕಷ್ಟೆ. ಸಂಪತ್ತೆಂದರೆ ಲಕ್ಷ್ಮೀ. ಆಕೆ ಶ್ರೀಮನ್ನಾರಾಯಣನ ಪತ್ನಿ. ಆಕೆಯ ಮತ್ತೊಂದು ಹೆಸರೇ ಚಂಚಲೆ. ಆಕೆ ಎಲ್ಲಿಗೇ ಹೋದರೂ ತನ್ನ ಒಡೆಯ ಶ್ರೀಮನ್ನಾರಾಯಣನ ಬಳಿಗೆ ತೆರಳಲು ಸದಾ ಉತ್ಸುಕಳಾಗಿರುವುದರಿಂದ ಆಕೆ ನಿಂತಲ್ಲಿ ನಿಲ್ಲಲಾರಳು. ಆದುದರಿಂದ ನಾರಾಯಣನನ್ನು ಒಲಿಸಿಕೊಳ್ಳದೇ ಲಕ್ಷ್ಮಿಯನ್ನು ಸದಾ ನಮ್ಮ ಬಳಿ ಇಟ್ಟುಕೊಳ್ಳಲು ಹೇಗೆ ಸಾಧ್ಯ? ನಾರಾಯಣನನ್ನು ಮೆಚ್ಚಿಸಬೇಕಾದರೆ ಸತ್ಯ. ನ್ಯಾಯ, ತ್ಯಾಗ, ದಾನ, ಧರ್ಮ ಮೊದಲಾದ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಲಕ್ಷ್ಮಿಗಿಂತಲೂ ಮಿಗಿಲಾದ ಪ್ರೀತಿ ನಮಗೆ ನಾರಾಯಣನ ಮೇಲಿರಬೇಕು! ಅದಿಲ್ಲದೆ ಕೇವಲ ಲಕ್ಷ್ಮಿ ಮಾತ್ರವೇ ಬೇಕೆಂದು ಬಯಸಿದರೆ ಹೇಗೆ? ಹಾಗೆ ಬಯಸಿದ್ದೇ ಆದಲ್ಲಿ ಆಕೆ ಯಾವ ಘಳಿಗೆಯಲ್ಲಿ ನಮ್ಮ ಕೈಯಿಂದ ಜಾರಿಹೋಗುವಳೋ ಎಂಬ ಆತಂಕ ಸದಾ ನಮ್ಮನ್ನು ಕಾಡುತ್ತಲೇ ಇರುವುದು.ಇದುವೇ ಅಭದ್ರತೆಯ ಭಯ! ಈ ಭಯದಲ್ಲಿ ಬದುಕುವವರು ಇತರರ ದೃಷ್ಟಿಯಲ್ಲಿ ಸಿರಿವಂತರೆಂದು ಕಂಡುಬರುವರೇ ಹೊರತು ಸ್ವತಃ ತಾವು ಶ್ರೀಮಂತರೆಂಬ ಭಾವನೆ ಅವರಲ್ಲಿ ಇರುವುದಿಲ್ಲ! ಕೇವಲ ಸಂಪತ್ತಿನಿಂದ ಸಿರಿವಂತರಾಗುವ ಭರದಲ್ಲಿ ಹೃದಯ ಶ್ರೀಮಂತಿಕೆಯನ್ನು ಕಳೆದು ಕೊಳ್ಳುವ ಅಪಾಯವೇ ಹೆಚ್ಚು. ಹಾಗಾಗಿ ಸ್ವಾರ್ಥ, ಮೋಹ, ಲೋಭವೇ ಮೈದುಂಬಿಕೊಂಡಿರುವವರ ಹೃದಯ ದೇಗುಲವು ದೇವರಿಲ್ಲದ ಗುಡಿಯಂತೆ ಬರಿದಾಗಿರುವುದು