ಉಡುಪಿ : ಉಡುಪಿ ಪ್ರಗತಿ ಸೌಧದಲ್ಲಿರುವ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ(ರಿ.) ಇದರ ಉಡುಪಿ ಪ್ರಾದೇಶಿಕ ಹಾಗೂ ಜಿಲ್ಲಾ ಕಛೇರಿಯಲ್ಲಿ ಪ್ರಾದೇಶಿಕ ನಿರ್ದೇಶಕರು ಹಾಗೂ ಜಿಲ್ಲಾ ನಿರ್ದೇಶಕರ ಮಾರ್ಗದರ್ಶನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಎ.ಶಿವಕುಮಾರ್ ಅಂಬಲಪಾಡಿ ಧ್ವಜಾರೋಹಣವನ್ನು ನೆರವೇರಿಸಿ, ವೀರ ಯೋಧರು ಹಾಗೂ ಹುತಾತ್ಮರನ್ನು ನೆನೆಸಿಕೊಂಡು, ದೇಶ ನನಗಾಗಿ ಏನು ಕೊಟ್ಟಿದೆ ಎನ್ನುವುದರ ಬದಲು ದೇಶಕ್ಕಾಗಿ ನಾನೇನು ಕೊಟ್ಟಿದ್ದೇನೆ ಎನ್ನುವ ಚಿಂತನೆಯನ್ನು ಜಾಗೃತಗೊಳಿಸಿ ಯಾವುದಾದರೊಂದು ರೀತಿಯಲ್ಲಿ ದೇಶ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ರಾಷ್ಟ್ರಾಭಿಮಾನವನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂಬ ಸಂದೇಶವನ್ನು ನೀಡಿ, ಸ್ವಾತಂತ್ರೋತ್ಸವದ ಶುಭಾಶಯವನ್ನು ತಿಳಿಸಿದರು.
ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕ ಶ್ರೀನಿವಾಸ ಪೂಜಾರಿ ಮಾತನಾಡಿ, 77ನೇ ಸ್ವಾತಂತ್ರೋತ್ಸವವನ್ನು ಯೋಧರ ಜೊತೆಗೆ ಆಚರಿಸಲು ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಎಸ್.ಡಿ.ಆರ್.ಎಫ್. ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ, ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿಗಳು, ಯೋಜನೆಯ ಪ್ರಾದೇಶಿಕ ಕಛೇರಿ, ಜಿಲ್ಲಾ ಕಛೇರಿ, ತಾಲೂಕು ಕಛೇರಿ, ತರಬೇತಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು