ಸಂಸಾರ ಸಾಗರವನ್ನು ದಾಟಲು ನಮಗೆ ಅತಿ ಮುಖ್ಯವಾಗಿ ಬೇಕಾದದ್ದು ಯಾವುದು? ಈ ಪ್ರಶ್ನೆಗೆ ಅನೇಕರ ಒಂದೇ ಇದ್ದೀತು-ಅದೇಂದರೆ ‘ಸಂಪತ್ತು’. ಸಂಪತ್ತಿಲ್ಲದೆ ಬದುಕುವುದು ಹೇಗೆ? ಬದುಕಿನ ಅಗತ್ಯಗಳನ್ನು, ಆಸೆಗಳನ್ನು, ವೈಭೋಗಗಳನ್ನು ತೀರಿಸಿಕೊಳ್ಳಲು ಸಂಪತ್ತಿನಿಂದ ಅಲ್ಲದೆ ಬೇರೆ ಯಾವುದರಿಂದ ಸಾಧ್ಯ? ‘ಹಣವಿಲ್ಲದವನು ಹೆಣಕ್ಕೆ ಸಮಾನ’ ಎಂಬ ಮಾತನ್ನು ಐಹಿಕ ಪ್ರಪಂಚದಲ್ಲಿ ಮುಳುಗಿರುವ ಎಲ್ಲರೂ ಹೇಳುವರು. ಹಣವಿಲ್ಲದಿದ್ದರೆ ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಹಲವರದ್ದು. ಹಾಗೆಯೇ ದುಡ್ಡೇ ದೊಡ್ಡಪ್ಪ ಎಂಬ ಮಾತು ಚಾಲ್ತಿಗೆ ಬರಲು ಕೂಡ ಭೋಗಲಾಲಸೆಯಿಂದ ತುಂಬಿರುವ ಬದುಕೇ ಕಾರಣ. ಆದರೆ ಸೂಕ್ಷ್ಮವಾಗಿ ನೋಡಿದರೆ ಹಣವು ಕೊಡುವ ಸುಖಕ್ಕೆ ಮಿಗಿಲಾದ ಆನಂದವನ್ನು ನಾವು ನಮ್ಮ ಮನಸ್ಸಿನಿಂದ, ಹೃದಯದಿಂದ ಪಡೆಯಬಹುದು. ಬದುಕಿನಲ್ಲಿ ನಾವು ಪಡೆಯುವ ಅನೇಕ ಅನುಭವಗಳನ್ನೇ ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಬದುಕಿನಲ್ಲಿ ನಾವು ಏನಾಗಿದ್ದೇವೆ ಎಂಬುದಕ್ಕೆ ನಾವು ಯಾರ ಸಹವಾಸದಲ್ಲಿ ಇದ್ದೇವೆ ಎಂಬುದೇ ಮುಖ್ಯ. ಸಜ್ಜನರ ಸಹವಾಸವು ಹಾಲು-ಜೇನು ಸವಿದಂತೆ. ಇರಾನ್ ದೇಶದ ಇನ್ನೊಂದು ನಾಣ್ಣುಡಿ ಹೇಳುವುದು ಹೀಗೆ: ‘ನೀವು ಸುಖ ಪಡುವುದು ನಿಮ್ಮ ಅರಿವಿನಿಂದ; ಉಳಿದವರನ್ನು ಸಂತಸ ಪಡುವಂತೆ ಮಾಡುವುದು ನಿಮ್ಮ ಸದ್ಗುಣಗಳಿಂದ’. ನಮ್ಮ ಬಳಿ ಇಲ್ಲದಿರುವ ವಸ್ತುಗಳನ್ನೇ ದೊಡ್ಡ ಕೊರತೆಯೆಂದು ಭಾವಿಸಿ ಸದಾ ಅತೃಪ್ತಿಯಲ್ಲಿ ಬದುಕುವ ನಮಗೆ ನಿಜಕ್ಕೂ ಬೇಕಾಗಿರುವುದು ಇರುವುದರಲ್ಲಿ ತೃಪ್ತಿಯನ್ನು ಕಾಣುವ ಮನೋಭಾವ. ಅದು ನಮ್ಮೊಳಗೇ ಇದಯೇ ವಿನಾ ಹೊರಗಲ್ಲ !