ತುಳುಸೀದಾಸರಿಗೆ ತಮ್ಮ ಪತ್ನಿಯ ಮೇಲೆ ಅಪಾರವಾದ ಪ್ರೀತಿ ಮತ್ತು ಮಮತೆ ಇತ್ತು. ಎಂದೂ ಅವರು ಪತ್ನಿಯನ್ನು ಬಿಟ್ಟಿರುತ್ತಿರಲಿಲ್ಲ. ಒಮ್ಮೆ ಮನೆಯನ್ನು ಸೇರುವಾಗ ನಡುರಾತ್ರಿಯಾಗಿತ್ತು. ಧಾರಾಕಾರ ಮಳೆ ಸುರಿಯುತ್ತಿತ್ತು. ನದಿಯು ಉಕ್ಕಿ ಹರಿಯುತ್ತಿತ್ತು. ನದಿಯನ್ನು ದಾಟದ ಮನೆಯನ್ನು ಸೇರುವಂತಿಲ್ಲ. ಆದರೆ ನದೀ ದಡದಲ್ಲಿ ಯಾವುದೇ ದೋಣಿ ಇರಲಿಲ್ಲ. ಅಂತಹ ವಿಷಮ ಸ್ಥಿತಿಯಲ್ಲೂ ತುಳಸೀದಾಸರಿಗೆ ಪತ್ನಿಯನ್ನೂ ಹೋಗಿ ಸೇರಬೇಕೆಂಬ ತವಲ ಕಡಿಮೆಯಾಗಲಿಲ್ಲ. ಆ ಹೊತ್ತಿಗೆ ಯಾವುದೋ ಒಂದು ತೆಪ್ಪ ತಮ್ಮೆಡೆಗೆ ನೀರಲ್ಲಿ ತೇಲಿ ಬರುತ್ತಿರುವುದು ಕಂಡಿತು. ಅದನ್ನೇ ಆಧರಿದಿಕೊಂಡು ಹೇಗೋ ಕಷ್ಪಪಟ್ಟು ನದಿಯನ್ನು ದಾಟಿದರು. ಮನೆಯ ಬಾಗಿಲು ಮುಚ್ಚಿತ್ತು. ಉಪ್ಪರಿಗೆಯಲ್ಲಿದ್ದ ಪತ್ನಿಯ ಕೋಣೆಯನ್ನು ಹೇಗೆ ಸೇರುವುದೆಂದು ಗೊತ್ತಾಗಲಿಲ್ಲ. ಅಷ್ಟು ಹೊತ್ತಿಗೆ ಯಾವುದೋ ಒಂದು ಹಗ್ಗ ಕೈಗೆ ಸಿಕ್ಕಿತು. ಅದನ್ನೇ ಹಿಡಿದುಕೊಂಡು ಅವರು ಉಪ್ಪರಿಗೆ ಕೋಣೆಯನ್ನು ಸೇರಿದರು. ಅಂತೂ ಪ್ರಿಯ ಪತ್ನಿಯ ಸಾನಿಧ್ಯ ದೊರಕಿತು! ಆದರೆ ಮರುದಿನ ತುಳಸೀದಾಸರಿಗೆ ಗೊತ್ತಾಯಿತು: ಹಿಂದಿನ ರಾತ್ರಿ ತಾವು ನದಿ ದಾಟಲು ಬಳಸಿದ ತೆಪ್ಪವು ನಿಜಕ್ಕೂ ತೆಪ್ಪವಾಗಿರದೆ ಮನುಷ್ಯನ ಶವವೇ ಆಗಿತ್ತು ಹಾಗೆಯೇ ಹಗ್ಗವು ಕಾಳಿಂಗ ಸರ್ಪವೇ ಆಗಿತ್ತು ಎಂದು. ಇದನ್ನು ಅರಿತ ಅವರ ಪತ್ನಿ ಬಹಳ ದುಃಖದಿಂದ ‘ನಿಮಗೆ ನನ್ನ ಮೇಲಿರುವ ಇಷ್ಟೊಂದು ಪ್ರೀತಿ ದೇವರ ಮೇಲೆ ಇದ್ದಿದ್ದರೆ ಅದೆಷ್ಟು ಒಳ್ಳೆಯದಿತ್ತು…….’ ಎಂದು ಮರುಗಿದಳು. ತುಳಸೀದಾಸರಿಗೆ ಪತ್ನಿಯ ಈ ಒಂದು ಮಾತಿನಿಂದಲೇ ಹೃದಯಪರಿವರ್ತನೆಯಾಯಿತು. ಪತ್ನಿಯ ಮೇಲಿದ್ದ ನಿಷ್ಕಳಂಕ ಪ್ರೀತಿಯನ್ನು ದೇವರ ಕಡೆಗೆ ತಿರುಗಿಸಿದರು. ಸುಲಭವಾಗಿ ದೇವರನ್ನು ಒಲಿಸಿಕೊಂಡು ಕೃತಾರ್ಥರಾದರು. ಐಹಿಕ ಸುಖಭೋಗಗಳ ಮೇಲೆ ನಮಗಿರುವ ಅತ್ಯಾಸೆ, ಪ್ರೀತಿ ಹಾಗೂ ಕಾಳಜಿಯನ್ನು ನಾವು ದೇವರೆಡೆಗೆ ತಿರುಗಿಸಿದ್ದೇ ಆದಲ್ಲಿ ದೇವರನ್ನು ಒಲಿಸಿಕೊಳ್ಳುವುದು ಕಷ್ಟವಲ್ಲ ಎಂಬ ಸಂದೇಶ ತುಳಸೀದಾಸರ ಜೀವನದಿಂದ ನಮಗೆ ಸಿಗುತ್ತದೆ.