ಕಲಿಯುಗದಲ್ಲಿ ಭಕ್ತಿಮಾರ್ಗದ ಮೂಲಕ ದೇವರನ್ನು ಅತ್ಯಂತ ಸುಲಭವಾಗಿ ಮತ್ತು ಅಷ್ಟೇ ಬೇಗನೆ ಒಲಿಸಿಕೊಳ್ಳುವುದು ಸಾಧ್ಯ ಎಂಬ ಮಾತಿದೆ. ಆದರೆ ಅಂತಹ ಭಕ್ತಿ ನಿಷ್ಕಳಂಕವಾಗಿರಬೇಕು; ನಿಷ್ಕಾಮವಾಗಿರಬೇಕು. ಐಹಿಕ ಸುಖಭೋಗಗಳನ್ನು ಅಪೇಕ್ಷಿಸಿ ಅವುಗಳನ್ನು ಈಡೇರಿಸಿಕೊಳ್ಳವ ಸಲುವಾಗಿ ದೇವರನ್ನು ಆರಾಧಿಸಿದ್ದೇ ಆದರೆ ಅದರ ಪರಿಣಾಮ ಏನು? ಇದನ್ನು ನಾವು ಚೆನ್ನಾಗಿ ತಿಳಿದಿರುವುದು ಅಗತ್ಯ. ಗೀತೆಯಲ್ಲಿ ಒಂದೆಡೆ ಶ್ರೀ ಕೃಷ್ಣ ಹೇಳುತ್ತಾನೆ: ಕರ್ಮಗಳ ಫಲದಲ್ಲಿ ನನಗೆ ಒಂದಿನಿತೂ ಇಚ್ಛೆ ಇರುವುದಿಲ್ಲ. ಆದುದರಿಂದ ಕರ್ಮಗಳು ನನ್ನನ್ನು ಅಂಟಿಕೊಳ್ಳುವುದಿಲ್ಲ. ಈ ಸತ್ಯವನ್ನು ಚೆನ್ನಾಗಿ ಅರಿತುಕೊಂಡು ನನ್ನನ್ನು ಭಜಿಸುವ, ಆರಾಧಿಸುವ ಭಕ್ತನೂ ಯಾವುದೇ ಕರ್ಮಗಳಿಂದ ಬಂಧಿಸಲ್ಪಡುವುದಿಲ್ಲ! ದೇವರ ಆರಾಧನೆ ನಿಷ್ಕಾಮವಾಗಿ ನಡೆದಾಗ ಮಾತ್ರವೇ ನಾವು ದೇವರನ್ನು ಸೇರಲು ಸಾಧ್ಯವಾಗುತ್ತದೆ ಎಂಬ ವಿಚಾರ ಶ್ರೀ ಕೃಷ್ಣನ ಈ ಸಂದೇಶದಲ್ಲಿ ಅಡಕವಾಗಿದೆ. ಆದುದರಿಂದಲೇ ಶ್ರೀ ಕೃಷ್ಣನು ತನ್ನ ಭಕ್ತರಿಗೆ ಕೊಡುವ ಎಚ್ಚರಿಕೆ ಇದು: ‘ಈ ಮಾನವ ಲೋಕದಲ್ಲಿ ಕರ್ಮಗಳ ಫಲವನ್ನು ಬಯಸುತ್ತಾ ನನ್ನ ಅಧೀನ ಅಂಶಗಳಾಗಿರುವ ದೇವತೆಗಳನ್ನು ಭಕ್ತರು ಆರಾಧಿಸುತ್ತಾರೆ. ಹಾಗೆ ಆರಾಧಿಸುವವರಿಗೆ ಕರ್ಮಗಳಿಂದ ಉತ್ಪತ್ತಿಯಾದ ಸಿದ್ಧಿಯೂ ಬಹುಬೇಗನೆ ದೊರಕುತ್ತದೆ. ಆದರೆ ಅವರಿಗೆ ನನ್ನ ಸಾಕ್ಷಾತ್ಕಾರ ಮಾತ್ರ ಪ್ರಾಪ್ತಿಯಾಗುವುದಿಲ್ಲ!’ ಐಹಿಕ ಸುಖ-ಭೋಗಗಳನ್ನು, ಆಯುರಾರೋಗ್ಯ, ಸಂಪದಭಿವೃದ್ಧಿಯನ್ನು ಅಪೇಕ್ಷಿಸಿ ನಮಗೆ ವಸ್ತುಗಳ ಅನುಗ್ರಹವಾಗುವುದೇನೋ ನಿಜ; ಆದರೆ ಅವು ಶಾಶ್ವತವಲ್ಲ. ಎಂಬ ಎಚ್ಚರಿಕೆ ಶ್ರೀ ಕೃಷ್ಣನು ಮಾತಿನಲ್ಲಿ ಅಂತರ್ಗತವಾಗಿದ