Home » ಸಾಣೂರು ರಾ.ಹೆ.ಅರೆಬರೆ ಕಾಮಗಾರಿ
 

ಸಾಣೂರು ರಾ.ಹೆ.ಅರೆಬರೆ ಕಾಮಗಾರಿ

ಮೃತ್ಯು ಕೂಪವಾಗಿರುವ ರಸ್ತೆ ಹೊಂಡ!

by Kundapur Xpress
Spread the love

ಕಾರ್ಕಳ : ಕಾರ್ಕಳ ತಾಲೂಕು ಸಾಣೂರು ಗ್ರಾಂ ವ್ಯಾಪ್ತಿಯ ಫುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮಂಗಳೂರಿನ ಬಿಕರ್ನಕಟ್ಟೆಯ ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್ ಕಾನ್ ಕಂಪನಿಯು ಕಳೆದ ಎಂಟು ತಿಂಗಳಿನಿಂದ ನಡೆಸುತ್ತಿದ್ದು,  ಜುಲೈ ತಿಂಗಳಿನಲ್ಲಿ ಮಳೆ ಪ್ರಾರಂಭವಾದ ಬಳಿಕ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ಕಡೆ ಅರೆಬರೆ ಕಾಮಗಾರಿಯಿಂದಾಗಿ ವಾಹನ ಚಾಲಕರಿಗೆ, ನಿತ್ಯ ಸಂಚರಿಸುವ ಪಾದಚಾರಿಗಳಿಗೆ ಸಂಕಷ್ಟಗಳನ್ನು ತಂದೊಡ್ಡುತ್ತಿದೆ.

 ರಸ್ತೆ ಡೈ ವರ್ಷನ್ ನಲ್ಲಿ ಹೊಂಡ! : ಸಾಣೂರು ಪೇಟೆಯ ಹಳೆ ಅಂಚೆ ಕಚೇರಿ ಎದುರುಗಡೆ, ಪದ್ಮನಾಭನಗರ_ ಮುದ್ದಣ್ಣ ನಗರದ ಕಡೆಗೆ ಹೋಗುವಲ್ಲಿ, ಹೋಟೆಲ್ ಕೃಷ್ಣ ಪ್ರಸಾದ್ ಮತ್ತು ಶಾಂಭವಿ ಸ್ಟೋರ್ಸ್ ಎದುರುಗಡೆ ರಸ್ತೆಯ ಮಧ್ಯ ಭಾಗದಲ್ಲಿ ದೊಡ್ಡ ಹೊಂಡ (ಸುಮಾರು 15 ಅಡಿ ಸುತ್ತಳತೆ..!)ನಿರ್ಮಾಣವಾಗಿದ್ದು , ನೀರು ತುಂಬಿ ರಸ್ತೆ ದಾಟುವಾಗ ಅಕಸ್ಮಾತಾಗಿ ದ್ವಿಚಕ್ರ ವಾಹನ ಹಾಗೂ ಇನ್ನಿತರ ವಾಹನಗಳು ಬ್ರೇಕ್ ಹಾಕಿ ಹೊಂಡಕ್ಕೆ ಇಳಿಯ ಬೇಕಾದ ಅನಿವಾರ್ಯತೆ ಇದ್ದು.. ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಹಲವಾರು ಬಾರಿ ಪಂಚಾಯತ್ ಸದಸ್ಯರು, ಪರಿಸರದ ನಾಗರಿಕರು ಗುತ್ತಿಗೆದಾರ ಕಂಪನಿಯ ಅಧಿಕಾರಿಗಳ ಬಳಿ ಹೊಂಡ ಮುಚ್ಚಿಸಿ, ಕಾಂಕ್ರೀಟ್ ಅಥವಾ ಡಾಮರೀಕರಣ ಮಾಡುವಂತೆ ಕೇಳಿಕೊಂಡಿದ್ದರೂ..ಈವರೆಗೂ ಯಾವುದೇ ರಿಪೇರಿ ಕಾರ್ಯ ಮಾಡದೆ ನಿರ್ಲಕ್ಷವನ್ನು ವಹಿಸಿರುತ್ತಾರೆ.ಪಶು ಚಿಕಿತ್ಸಾಲಯ ಕಟ್ಟಡ ನೆಲಸಮ.. ಪ್ರಾರಂಭವಾಗದ ತಡೆಗೋಡೆ ಕಾಮಗಾರಿ.ಈ ಹಿಂದೆ ಪಕ್ಕದಲ್ಲಿ ಇರುವ ಸಾಣೂರು ಯುವಕ ಮಂಡಲದ ಮೈದಾನದ ಮುಂಭಾಗ ಜರಿದಿದ್ದು ಪಶು ಚಿಕಿತ್ಸಾಲಯ ಬೀಳುವ ಸ್ಥಿತಿಯಲ್ಲಿರುವ ಬಗ್ಗೆ ಹಲವಾರು ವರದಿಗಳು ಪತ್ರಿಕೆ ದೃಶ್ಯಮಾಧ್ಯಮದಲ್ಲಿ ಬಂದು ಸ್ಥಳೀಯ ಜನರು ಪ್ರತಿಭಟಿಸಲು ಸಿದ್ಧತೆ ನಡೆಸುತ್ತಿದ್ದಾಗ,  ಈ ಹಿಂದಿನ ಡಿಸಿ ಶ್ರೀ ಕುರ್ಮಾ ರಾವ್ ರವರು ಕೂಡಲೇ ಗುತ್ತಿಗೆದಾರ ಕಂಪನಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಪಶು ಸಂಗೋಪನ ಇಲಾಖೆಗೆ ಸೂಕ್ತ ಎಚ್ಚರಿಕೆ ಹಾಗೂ ಆದೇಶವನ್ನು ನೀಡಿ ಪಶು ಚಿಕಿತ್ಸಾಲಯ ಕಟ್ಟಡವನ್ನು ನೆಲಸಮ ಮಾಡಲಾಯಿತು ಎಂದು *ಸಾಣೂರು ಯುವಕ ಮಂಡಲದ ಅಧ್ಯಕ್ಷರು ಹಾಗೂ ಪಂಚಾಯತ್ ಮಾಜಿ* ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿಯವರು ತಿಳಿಸಿದರು

ಮಣ್ಣು ಜರಿದಿರುವ ಭಾಗಕ್ಕೆ ತಡೆಗೋಡೆ ಕಾಮಗಾರಿ ಆರಂಭ: ಮುರತಂಗಡಿ ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿಗೆ ಹೋಗುವ ರಸ್ತೆ ಮತ್ತು ಮಣ್ಣು ಜರಿದಿರುವ ಭಾಗಕ್ಕೆ ತಡೆಗೋಡೆ ನಿರ್ಮಾಣವಾಗುತ್ತಿರುವುದು ಸಮಾಧಾನಕರ ಅಂಶ.ಸಾಣೂರು ಯುವಕ ಮಂಡಲದ ಆಟದ ಮೈದಾನದ ಎದುರು ಮಣ್ಣು ಜರಿದಿರುವ ಭಾಗಕ್ಕೆ ತಡೆಗೋಡೆಯನ್ನು ನಿರ್ಮಾಣ ಮಾಡಬೇಕೆಂಬ ಜನರ ಬೇಡಿಕೆಗೆ ಇನ್ನೂ ಕೂಡ ಯಾವುದೇ ಸ್ಪಂದನೆ ದೊರೆತಿಲ್ಲ. ಇದೀಗ ರಸ್ತೆಯ ಮಧ್ಯ ಭಾಗದಲ್ಲಿ ಹೊಂಡದಲ್ಲಿ ನೀರು ನಿಲ್ಲುತ್ತಿದ್ದು, ರಾತ್ರಿ ವಾಹನಗಳು ಸಂಚರಿಸುವಾಗ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೆ, ರಸ್ತೆ ಹೊಂಡವು ಮೃತ್ಯು ಕೂಪ ವಾಗುವ ಅಪಾಯವಿದೆ. ಸಾಣೂರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾದ ಶ್ರೀ ಯುವರಾಜ ಜೈನ್ ರವರು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಅಪಾಯಕಾರಿ ರಸ್ತೆ ಹೊಂಡವನ್ನು ತೋರಿಸಿದರೂ… ಯಾವುದೇ ಕ್ರಮವನ್ನು ಕೈಗೊಳ್ಳದೆ ನಿರ್ಲಕ್ಷ ತೋರಿಸಿರುತ್ತಾರೆ.

ಪದ್ಮನಾಭನಗರ ರಸ್ತೆ ಕಡಿತ: ಹೆದ್ದಾರಿ ಕಾಮಗಾರಿಯಿಂದಾಗಿ ಚತುಷ್ಪತ ರಸ್ತೆ ಹಾಗೂ ಸರ್ವಿಸ್ ರೋಡ್ ನಿರ್ಮಾಣ ಸಂದರ್ಭದಲ್ಲಿ ರೂಪಾಯಿ 25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಾಮೀಣ ರಸ್ತೆ ಕಡಿತಗೊಂಡಿದ್ದು, ಪಂಚಾಯತ್ ರಸ್ತೆ ಹಾನಿ ಗೊಂಡಿರುತ್ತದೆ.ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯು ಒಂದು ವಾರದ ಒಳಗೆ ಕ್ರಮ ಕೈಗೊಳ್ಳದಿದ್ದರೆ ಸ್ಥಳೀಯ ನಾಗರಿಕರು ..ಪಂಚಾಯತ್ ನೇತ್ರತ್ವದಲ್ಲಿ ಬೀದಿಗಿಳಿದು ಪ್ರತಿಭಟಿಸಲು ಸಿದ್ಧತೆ ನಡೆಸುತ್ತಿದ್ದಾರೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಮುಖಂಡರಾದ ಶ್ರೀ ಸಾಣೂರು ನರಸಿಂಹ ಕಾಮತ್ ರವರು ಎಚ್ಚರಿಕೆಯನ್ನು ನೀಡಿರುತ್ತಾರೆ

   

Related Articles

error: Content is protected !!