ಬದುಕಿನಲ್ಲಿ ನಾವೇಕೆ ಇಷ್ಟೊಂದು ಸ್ವಾರ್ಥಪರರಾಗಿದ್ದೇವೆ ಎಂಬ ಪ್ರಶ್ನೆ ನಮ್ಮ ಅಂತರ್ಯವನ್ನು ಆಗಾಗ ಕಾಡುತ್ತಲೇ ಇರುತ್ತದೆ. ಅದಕ್ಕೆ ಕಾರಣ ಇಷ್ಟೇ ಐಹಿಕ ಸುಖಭೋಗಗಳೇ ನಿಜವಾದ ಸುಖವೆಂಬ ಭ್ರಮೆ ನಮ್ಮಲ್ಲಿರುವುದರಿಂದ ನಮ್ಮ ಯಾವತ್ತೂ ಕರ್ಮಗಳು ಫಲಾಪೇಕ್ಷೆಯನ್ನು ಹೊಂದಿರುತ್ತವೆ. ಈ ಪ್ರಪಂಚವು ಸತ್ತ್ವ, ರಜಸ್ಸು ಹಾಗೂ ತಮಸ್ಸಿನಿಂದ ಒಡಗೂಡಿರುವ ಪ್ರಕೃತಿಯಾಗಿರುವುದರಿಂದ ಅದರ ನಿರಂತರ ಪ್ರಭಾವಕ್ಕೆ ನಾವು ಗುರಿಯಾಗಿದ್ದೇವೆ. ಅಂತೆಯೇ ನಾವೆಸಗುವ ಕರ್ಮಗಳು ಒಳಿತು-ಕೆಡುಕುಗಳಿಂದ ಯುಕ್ತವಾಗಿವೆ. ಕರ್ಮಫಲದಲ್ಲಿ ನಾವು ಹೆಚ್ಚೆಚ್ಚು ಆಸಕ್ತರಾದಂತೆ ರಜಸ್ಸು ಹಾಗೂ ತಮಸ್ಸಿನ ಸೆಳೆತಕ್ಕೆ ಗುರಿಯಾಗುವೆವು. ಪರಿಣಾಮವಾಗಿ ಅಪೇಕ್ಷಿತ ಫಲಪ್ರಾಪ್ತಿಗಾಗಿ ಯಾವೆಲ್ಲ ಮಾರ್ಗೋಪಾಯಗಳು ಅಗತ್ಯವೋ ಅನಿವಾರ್ಯವೋ ಅವುಗಳನ್ನು ಅನುಸರಿಸುವೆವು. ಫಲವೇ ಪ್ರಧಾನವಾದಾಗ ನಾವೆಸಗುವ ಕರ್ಮಗಳು ಪಾವಿತ್ರ್ಯದಿಂದ ದೂರಸರಿಯುವುದು ಅನಿವಾರ್ಯವೇ. ಆದರೆ ಪ್ರಕೃತಿಯ ಮಾಯೆಗೆ ಸಿಲುಕಿದ ಮಾತ್ರಕ್ಕೆ ನಾವು ಫಲಾಪೇಕ್ಷೆಯಿಂದಲೇ ಕರ್ಮನಿರತರಾಗಬೇಕೆಂಬ ಇಚ್ಛೆ ಭಗವಂತನದ್ದಾಗಿಲ್ಲ. ವರ್ಷಕಾಲದಲ್ಲಿ ಮಳೆ ಸುರಿಯುವಾಗ ಯಾವೆಲ್ಲ ಬಗೆಯ ಸಸ್ಯಗಳು, ಮರಗಿಡಗಳು ಬೆಳೆಯಬೇಕು ಎಂಬ ನಿರ್ಬಂಧವನ್ನು ಮಳೆಯು ಹಾಕುವುದುಂಟೆ? ಮಳೆ ತನ್ನ ಕೆಲಸವನ್ನ ಮಾತ್ರ ಮಾಡುತ್ತದೆ. ಆ ಮಳೆಯ ಪ್ರಯೋಜನ ಪಡೆದು ಕುರುಚಲು ಗಿಡಗಳು, ಮುಳ್ಳಿನ ಗಿಡಗಳು ಮಾತ್ರವಲ್ಲದೆ ಉತ್ತಮ ಫಲ ನೀಡುವ ಸಸಿಗಳು ಕೂಡ ಬೆಳೆಯುತ್ತವೆ ಕರ್ಮ ಪಥದಲ್ಲಿ ತನ್ನ ಪರಮ ಭಕ್ತರು ಸತ್ಪಥದಲ್ಲಿ ಅಂತಿಮವಾಗಿ ತನ್ನನ್ನು ಸೇರಬೇಕೆಂಬ ಆಶಯ ಗೀತೆಯಲ್ಲಿ ಶ್ರೀಕೃಷ್ಣನದ್ದಾಗಿದೆ ! ಕರ್ಮಫಲದಲ್ಲಿ ನನಗೆ ಒಂದಿನಿತೂ ಇಚ್ಛೆ ಇಲ್ಲ; ಹಾಗಾಗಿಯೇ ಕರ್ಮಗಳು ನನ್ನನ್ನು ಅಂಟಿಕೊಳ್ಳುವುದಿಲ್ಲ. ಇದನ್ನು ಯಥಾರ್ಥವಾಗಿ ಯಾರು ತಿಳಿದುಕೊಳ್ಳುವನೋ ಅವನಿಗೂ ಕರ್ಮ ಬಂಧನ ಉಂಟಾಗುವುದಿಲ್ಲ’ ಎನ್ನುವ ಶ್ರೀಕೃಷ್ಣನ ಮಾತಿನಲ್ಲಿ ನಾವು ಅನುಸರಿಸಬೇಕಾದದ್ದು ಕರ್ಮದ ಮಾರ್ಗ ಎಂಬ ಆಶಯ ಅತ್ಯಂತ ಸ್ಪಷ್ಟವಾಗಿದೆ