Home » ಭಕ್ತಿಯ ಶಕ್ತಿ
 

ಭಕ್ತಿಯ ಶಕ್ತಿ

by Kundapur Xpress
Spread the love

ನಮ್ಮ ಬದುಕಿನ ಬಲು ದೊಡ್ಡ ಸವಾಲು ಯಾವುದು? ಪ್ರಶ್ನೆಯೇನೋ ಬಹಳ ಗಂಭೀರ. ಆದರೆ ಉತ್ತರ ಅಷ್ಟೇ ಸರಳ, ನಮ್ಮನ್ನು ನಾವು ಗೆಲ್ಲುವುದೇ ನಮ್ಮ ಬದುಕಿನ ಬಲು ದೊಡ್ಡ ಸವಾಲು ! ಇತರರನ್ನು ನಾವು ಗೆಲ್ಲುವುದು ಕಷ್ಟವಲ್ಲ ; ಆದರೆ ನಮ್ಮನ್ನು ನಾವು ಗೆಲ್ಲುವುದೇ ಬಲು ಕಷ್ಟ ನಮ್ಮೊಳಗಿನ ಸ್ವಾರ್ಥ, ದುರಾಸೆ, ವ್ಯಾಮೋಹ, ಲೋಭ, ಮದ, ಮತ್ಸರಗಳು ನಮ್ಮ ಮೇಲೆ ಪ್ರಭುತ್ವವನ್ನು ಹೊಂದಿರುವುದರಿಂದಲೇ ನಾವು ಸದಾ ಅತೃಪ್ತಿಯಿಂದಲೂ ಹತಾಶೆಯಿಂದಲೂ ಇರುವಂತಾಗಿದೆ. ನಮ್ಮೊಳಗೆ ಆತ್ಮರೂಪಿಯಾಗಿರುವ ದೇವರನ್ನು ಕಾಣಲು ಅಡ್ಡಿಬರುವ ಈ ಶತ್ರುಗಳನ್ನು ಗೆಲ್ಲದೆ ನಾವು ಆತ್ಮಾನಂದವನ್ನು ಪಡೆಯಲಾರೆವು. ಈ ಶತ್ರುಗಳಾದರೋ ದೇಹ ಸುಖವೇ ಪರಮ ಸುಖವೆಂಬ ಭ್ರಾಂತಿಯನ್ನು ನಮ್ಮಲ್ಲಿ ಉಂಟುಮಾಡಲು ಕಟಿಬದ್ಧವಾಗಿವೆ. ಆತ್ಮಾನಂದ ವೊಂದೇ ನಿಜವಾದ ಆನಂದ ಎಂಬ ಸತ್ಯವನ್ನು ಕಾಣಲು ಈ ಶತ್ರುಗಳು ಎಷ್ಟು ಮಾತ್ರಕ್ಕೂ ಬಿಡವು. ಈ ಶತ್ರುಗಳನ್ನು ಸುಟ್ಟು ಬೂದಿ ಮಾಡದೆ ನಮಗೆ ಉಳಿಗಾಲವಿಲ್ಲ. ಏಕೆಂದರೆ ಅವುಗಳು ನಮ್ಮಲ್ಲಿ ವಿಜೃಂಭಿಸುವಷ್ಟು ಕಾಲವೂ ನಾವು ಜನನ-ಮರಣಗಳ ಚಕ್ರದಿಂದ ಪಾರಾಗಲಾರೆವು. ಪುನರಪಿ ಜನನಂ, ಪುನರಪಿ ಮರಣಂ ಎಂಬ ವಾಕ್ಯಕ್ಕೆ ಅಂಟಿದವರಾಗಿ ಸ್ವಾರ್ಥಪರ ಜೀವನವನ್ನೇ ನಡೆಸುವೆವು. ಚೈತನ್ಯ ಮಹಾ ಪ್ರಭುಗಳ ಆಣತಿಯಂತೆ ಪ್ರಾರ್ಥನೆ ಮತ್ತು ಭಕ್ತಿಯ ಮೂಲಕ ನಾವು ನಮ್ಮೊಳಗಿನ ಶತ್ರುಗಳನ್ನು ನಾಶಮಾಡಬಲ್ಲೆವು. ಸಣ್ಣದೊಂದು ಬೆಂಕಿಯ ಕಿಡಿಯು ದೊಡ್ಡ ಜ್ವಾಲೆಯಾಗಿ ಪ್ರಜ್ವಲಿಸಿ ಎಲ್ಲವನ್ನೂ ಸುಟ್ಟು ನಾಶ ಮಾಡಬಲ್ಲ ಶಕ್ತಿಯನ್ನು ಹೇಗೆ ಪಡೆಯುವುದೋ ಹಾಗೆಯೇ ದೇವರಲ್ಲಿ ನಾವು ನಿವೇದಿಸುವ ಪ್ರಾರ್ಥನೆ, ಭಕ್ತಿ, ಭಜನೆ ಇತ್ಯಾದಿಗಳು. ಇವು ಆರಂಭದಲ್ಲಿ ಸಣ್ಣ ಬೆಂಕಿಯ ಕಿಡಿಯಂತೆ ಇದ್ದು ಅನಂತರ ನಿರಂತರ ಪ್ರಾರ್ಥನೆ, ಭಕ್ತಿಯ ದೆಸೆಯಿಂದಾಗಿ ಕೆನ್ನಾಲಗೆಯ ದೊಡ್ಡ ಜ್ವಾಲೆಯಾಗಿ ಬೆಳೆದು ನಮ್ಮೊಳಗಿನ ಅರಿಷಡ್ವರ್ಗಗಳೆಂಬ ಶತ್ರುಗಳನ್ನು ನಾಶಮಾಡಬಲ್ಲವು

   

Related Articles

error: Content is protected !!