ನಮ್ಮ ಹೃದಯ ದೇಗುಲದಲ್ಲಿ ವಿರಾಜಮಾನನಾಗಿರುವ ದೇವರನ್ನು ಕಾಣುವ ಪ್ರಯತ್ನದಲ್ಲಿ ಭಕ್ತಿಮಾರ್ಗಕ್ಕಿಂತ ಸುಲಭದ ಮಾರ್ಗ ಬೇರೊಂದಿಲ್ಲ. ಈ ಮಾತನ್ನು ಶ್ರೀ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರು ಪದೇಪದೇ ಹೇಳಿದ್ದಾರೆ. ಭಕ್ತಿಮಾರ್ಗವನ್ನು ಅನುಸರಿಸಲು ನಮ್ಮನ್ನು ನಾವು ಕಾಯಾ, ವಾಚಾ, ಮನಸಾ ಪರಿಶುದ್ಧ ವಾಗಿಟ್ಟುಕೊಳ್ಳುವುದು ಮುಖ್ಯ. ದೇಹದಿಂದಲೂ ಮಾತಿನಿಂದಲೂ ಮನಸ್ಸಿನಿಂದಲೂ ನಾವು ಶುದ್ಧ ಚಾರಿತ್ರ್ಯವನ್ನು ಹೊಂದಿರಬೇಕು. ದೇಹದ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದು ದೇಹಶಕ್ತಿಯ ಮೂಲಕ ದುರ್ಬಲರನ್ನು ಮಣಿಸಲು ಅಲ್ಲ: ಸ್ವಸ್ಥ ಚಿತ್ರವನ್ನು ಹೊಂದುವ ಮೂಲಕ ಸನ್ಮಾರ್ಗದಲ್ಲಿ ಸಾಗಲು; ದೇವರ ಪ್ರೀತ್ಯರ್ಥವಾಗಿ ಸತ್ಕಾರ್ಯಗಳನ್ನು ಕೈಗೊಳ್ಳಲು ಎಂಬುದು ಮುಖ್ಯ. ಇದನ್ನು ಬದುಕಿನಲ್ಲಿನ ನಮ್ಮ ಅನುಭವದಿಂದಲೇ ನಾವು ಅರಿಯಬಲ್ಲೆವು. ಆದರೂ ಆರೋಗ್ಯದಿಂದ ಇರುವುದು ಎಂದರೇನು ಎಂಬುದನ್ನು ನಾವು ಮೂಲಭೂತವಾಗಿ ತಿಳಿದಿರಬೇಕು. ವಿಶ್ವ ಆರೋಗ್ಯ ಸಂಸ್ಥೆಯು ನೀಡುವ ವ್ಯಾಖ್ಯೆಯೇ ಇಲ್ಲಿ ಉಲ್ಲೇಖನೀಯ: ‘ಆರೋಗ್ಯ ಎಂದರೆ ಬರಿಯ ರೋಗ ರಹಿತ, ಊನರಹಿತ ಸ್ಥಿತಿಯಲ್ಲ; ಅದೊಂದು ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾದ ಸುಸ್ಥಿತಿ’ ಆದುದರಿಂದಲೇ ಆರೋಗ್ಯದಿಂದಿರುವುದೆಂದರೆ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅತ್ಯಂತ ಸಶಕ್ತ ಸ್ಥಿತಿಯಲ್ಲಿರುವುದು. ಹಾಗೆ ಇರುವುದರ ಮೂಲಕವೇ ವೈಯಕ್ತಿಕ ವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಮಷ್ಟಿ ಹಿತವನ್ನು ಸಾಧಿಸುವ ವಿಶಾಲ ಮನೋ ಭಾವವನ್ನೂ ಹೊಂದಿರಲು ಸಾಧ್ಯ. ಆಗ ಮಾತ್ರವೇ ಇಡಿಯ ಜಗತ್ತೇ ಒಂದು ಕುಟುಂಬವೆಂಬ ವಿಶ್ವಭ್ರಾತೃತ್ವ’ದ ಪರಿಕಲ್ಪನೆಯನ್ನು ಅರಗಿಸಿಕೊಳ್ಳುವುದು ನಮಗೆ ಸಾಧ್ಯವಾಗುವುದು