ದೇಹವು ಆರೋಗ್ಯಪೂರ್ಣವಾಗಿರಬೇಕಾದರೆ ನಾವು ಸೇವಿಸುವ ಆಹಾರ ಶುದ್ಧವೂ ಆರೋಗ್ಯಪೂರ್ಣವೂ ಆಗಿರಬೇಕು. ನಾವು ಏನನ್ನು ತಿನ್ನುವೆವೋ ಅದುವೇ ನಾವು ಏನೆಂಬುದನ್ನು ನಿರ್ಧರಿಸುವುದು! ನಮ್ಮ ರೀತಿ, ನೀತಿ, ನಡೆ, ನುಡಿ ಎಲ್ಲವೂ ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ. ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕವೆಂದು ಅದರ ಗುಣ ಮತ್ತು ಸ್ವಭಾವದಿಂದ ನಿರ್ಧರಿಸಲಾಗುತ್ತದೆ. ಆಹಾರದ ಗುಣ ಮತ್ತು ಸ್ವಭಾವ ಮಾತ್ರವಲ್ಲದೆ ಅದನ್ನು ಸೇವಿಸುವ ಪ್ರಮಾಣ ಕೂಡ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಅಜೀರ್ಣವಾಗುವಷ್ಟು ಉಂಡರೆ ದೇಹದ ಆರೋಗ್ಯವು ಸುಲಭವಾಗಿ ಕೆಡುವುದು. ಹಾಗೆ ತಿಂದ ಆಹಾರ ಜೀರ್ಣವಾಗುವಷ್ಟು ಹೊತ್ತು ಮನಸ್ಸಿಗೆ ಮಂಪರು ಕವಿದು ದೇಹವು ನಿದ್ರಾವಶವಾಗುವುದು. ತಿಂದ ಆಹಾರವನ್ನು ಕರಗಿಸುವುದರಲ್ಲೇ ದೇಹವೆಂಬ ಯಂತ್ರ ನಿರತವಾಗುವುದು. ಹಾಗಾಗಿ ಮೆದುಳು ಜಾಗೃತ ಸ್ಥಿತಿಯಲ್ಲಿರಲು ಅವಶ್ಯವಿರುವಷ್ಟು ಪ್ರಮಾಣದಲ್ಲಿ ರಕ್ತವು ಪೂರೈಕೆಯಾಗದಿರುವುದರಿಂದ ಅದು ಅನಿವಾರ್ಯವಾಗಿ ವಿಶ್ರಾಮವನ್ನು ಘೋಷಿಸುವುದು. ಆಹಾರ ಸೇವನೆಗೆ ಇತಿಮಿತಿ ಹೇರುವುದರಲ್ಲೇ ದೇಹದ ಆರೋಗ್ಯವನ್ನು ಕಾಪಿಡುವ ರಹಸ್ಯವಿದೆ. ಇದನ್ನು ತಿಳಿದುಕೊಂಡಿದ್ದರೂ ಕೂಡ ನಾವು ಇಂದ್ರಿಯದಾಸರಾಗಿ ಹೊಟ್ಟೆಗೆ ಶರಣು ಹೊಡೆಯುತ್ತೇವೆ. ಆ ಮೇಲೆ ಅಜೀರ್ಣದ ಪೀಡೆಯನ್ನು ಅನುಭವಿಸುವಾಗ ‘ಮಾಡಿದ ತಪ್ಪಿಗೆ ಪಶ್ಚಾತ್ತಾಪ’ ಪಡುತ್ತೇವೆ! ಹೀಗಾಗದಂತೆ ಮಾಡಲು ಏನು ಮಾಡಬೇಕು? ನಮ್ಮ ಇಂದ್ರಿಯಗಳ ಮೇಲೆ ಹತೋಟಿಯನ್ನು ಹೊಂದಬೇಕಲ್ಲದೆ ಬೇರೆ ಉಪಾಯವಿಲ್ಲ. ನಮ್ಮ ದೇಹವು ನಮ್ಮ ಆಜ್ಞಾನುಸಾರ ವರ್ತಿಸುವ ಶಿಸ್ತಿನ ಸಿಪಾಯಿಯಾಗಿರಬೇಕೇ ವಿನಾ ನಾವು ಅದರ ಗುಲಾಮರಾಗಿರುವುದಲ್ಲ.