ದೇಹದ ಶಕ್ತಿ-ಸಾಮಥ್ರ್ಯಗಳು ನಮ್ಮ ಅರಿವಿಗೆ ಬರುವುದು ಮನಸ್ಸಿನ ಮೂಲಕವಾದರೆ ಅದರ ಇತಿ-ಮಿತಿಗಳ ಅರಿವು ಉಂಟಾಗುವುದು ಬುದ್ಧಿಯ ನೆರವಿನಿಂದ ಬುದ್ಧಿಗೆ ತರ್ಕಶಕ್ತಿ ಇರುವುದರಿಂದಲೇ ಅದು ಪ್ರತಿಯೊಂದರ ಇತಿಮಿತಿಗಳನ್ನು, ಸಾಧಕ-ಬಾಧಕಗಳನ್ನು, ಒಳಿತು-ಕೆಡುಕುಗಳನ್ನು ವಿವೇಚಿಸಬಲ್ಲುದು. ಆದರೆ ನಮ್ಮ ಯಾವತ್ತೂ ಶಕ್ತಿ-ಸಾಮಥ್ರ್ಯಗಳ ಬಗ್ಗೆ ನಮ್ಮಲ್ಲಿ ವಿಶ್ವಾಸ ಏರ್ಪಡುವುದು ಆತ್ಮಬಲದ ನೆರವಿನಲ್ಲಿ ಇದನ್ನೇ ನಾವು ಆತ್ಮವಿಶ್ವಾಸ ಎನ್ನುವುದು. ಆದರೆ ಅತಿಯಾದ ಆತ್ಮ ವಿಶ್ವಾಸವು ವಾಸ್ತವತೆಯನ್ನು ಸ್ವೀಕರಿಸಲು ನಿರಾಕರಿಸುವ ಮನೋಭಾವವೇ ಆಗಿದೆ. ದೇಹದ ಇತಿಮಿತಿಯನ್ನು ಅರಿಯುವಾಗ ಅದರ ಮೇಲೆ ಮನಸ್ಸು ಉಂಟು ಮಾಡುವ ಪ್ರಭಾವ ಎಷ್ಟು ಎಂಬುವುದನ್ನು ಕೂಡ ಗಣನೆಗೆ ತೆಗೆದುಕೊಳ್ಳುವುದು ಅಗತ್ಯ. ದೇಹವು ಅನಾರೋಗ್ಯಕ್ಕೆ ಗುರಿಯಾದಾಗ ಒಡನೆಯೇ ಔಷಧಗಳ ಮೊರೆ ಹೋಗುವ ಸ್ವಭಾವ ನಮ್ಮದು. ಆಧುನಿಕ ನಾಗರಿಕ ಬದುಕು ಅಷ್ಟರ ಮಟ್ಟಿಗೆ ಅಭದ್ರ, ಭಯಗ್ರಸ್ತ ! ಹಾಗಾಗಿ ಮರಣಕ್ಕಿಂತಲೂ ಮರಣಭಯದಿಂದ ಸಾಯುವವರೇ ಅಧಿಕ. ದೇಹಕ್ಕೆ ಅದರದ್ದೇ ಆದ ಸ್ವಭಾವ ಇದೆ. ಅನಾರೋಗ್ಯವನ್ನು ತಾನೇ ನಿವಾರಿಸಿಕೊಳ್ಳುವ ವ್ಯವಸ್ಥೆಯೂ ಅದರಲ್ಲಿ ಅಂತರ್ಗತವಾಗಿದೆ. ಎಲ್ಲಕ್ಕಿಂತ ಪ್ರಬಲವಾದ ಔಷಧಿ ಮನಸ್ಸೇ ಆಗಿದೆ. ಮನಸ್ಸಿನ ಸಮತೆಯನ್ನು ನಾವು ಎಷ್ಟು ಚೆನ್ನಾಗಿ ಕಾಯ್ದುಕೊಳ್ಳುವೆವೋ ಅಷ್ಟೇ ಚೆನ್ನಾಗಿ ದೇಹದ ಆರೋಗ್ಯವೂ ಉಳಿಯುತ್ತದೆ; ಸ್ಥಿರವೂ ಆಗಿರುತ್ತದೆ. ಏಕೆಂದರೆ ನಮ್ಮ ಮನಸ್ಸಿನಲ್ಲಿ ಏನಿರುವುದೋ ಅದೇ ನಮ್ಮ ಜೀವನವಾಗಿರುತ್ತದೆ. ಮನಸ್ಸು ಪ್ರಕ್ಷುಬ್ಧವಾದರೆ ದೇಹದ ಆರೋಗ್ಯವೂ ಬಹಳ ಬೇಗನೆ ಹದಗೆಡುತ್ತದೆ. ಖ್ಯಾತ ಚಿಂತಕ, ಸಾಹಿತಿ ಪ್ರೇಮಚಂದ್ರ ಹೇಳುತ್ತಾರೆ: ಕುದಿಯುವ ನೀರಿನಲ್ಲಿ ಹೇಗೆ ನಮ್ಮ ಮುಖ ಕಾಣಿಸದೋ ಹಾಗೆಯೇ ಕುದಿಯುವ ಮನಸ್ಸಿನಲ್ಲಿ ಕೂಡ ಹಿತವು ನೆಲೆ ಗೊಳ್ಳದು! ಸಂತೃಪ್ತ ಬದುಕಿನ ರಹಸ್ಯ ದೇಹದ ಆರೋಗ್ಯದಲ್ಲಿದ್ದರೆ ದೇಹದ ಆರೋಗ್ಯದ ಕೀಲಿಕೈ ಮನಸ್ಸಿನಾಳದಲ್ಲಿದೆ.