Home » ಬಿ.ಕೆ. ಹರಿಪ್ರಸಾದ್ ಗೆ ಧನ್ಯವಾದ
 

ಬಿ.ಕೆ. ಹರಿಪ್ರಸಾದ್ ಗೆ ಧನ್ಯವಾದ

ಕುಯಿಲಾಡಿ ಸುರೇಶ್ ನಾಯಕ್

by Kundapur Xpress
Spread the love

ಕೊನೆಗೂ ಕಾಂಗ್ರೆಸಿಗರ ಬಾಯಿಯಿಂದ ಸತ್ಯ ಹೊರ ಬಿದ್ದಿದೆ; ಸಿದ್ದು ಜನ್ಮ ಜಾತಕ ಜಾಲಾಡಿಸಿದ ಬಿ.ಕೆ. ಹರಿಪ್ರಸಾದ್ ಗೆ ಧನ್ಯವಾದ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ‘ಕೈಗೆ ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು, ಪಂಚೆಯೊಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ’ ಎಂದು ಮಾರ್ಮಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ಜಾತಕ ಜಾಲಾಡಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ರವರಿಗೆ ಧನ್ಯವಾದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಸಿದ್ದರಾಮಯ್ಯ, ‘ಅಧಿಕಾರ ಸಿಕ್ಕಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಅಡ್ವಾಣಿಯವರನ್ನು ಬೇಟಿ ಮಾಡಿ ಬಿಜೆಪಿ ಸೇರಲು ಹೋಗಿದ್ದು, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಇದಕ್ಕೆ ಸಾಕ್ಷಿಯಾಗಿದ್ದಾರೆ’ ಎನ್ನುವ ಬಿ.ಕೆ. ಹರಿಪ್ರಸಾದ್ ರವರ ಮಾತಿನ ಮೂಲಕ ಕೊನೆಗೂ ಕಾಂಗ್ರೆಸಿಗರ ಬಾಯಿಯಿಂದ ಸತ್ಯ ಹೊರ ಬಂದಂತಾಗಿದೆ.

ಗುರುವಿಗೇ ತಿರುಮಂತ್ರ ಹಾಕಿರುವ ಸಿದ್ಧರಾಮಯ್ಯ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಏನೆಲ್ಲಾ ಅವಾಂತರಗಳನ್ನು ಎಸಗಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ಹರಿಪ್ರಸಾದ್ ರವರು ಉಲ್ಲೇಖಿಸಿರುವ ‘ದೇವರಾಜ ಅರಸು ಕಾರಿನಲ್ಲಿ ಕುಳಿತ ಮಾತ್ರಕ್ಕೆ ಅರಸು ಆಗಲು ಸಾಧ್ಯವಿಲ್ಲ; ಅರಸು ಅವರ ರೀತಿ ಸಣ್ಣ ಸಮುದಾಯಗಳ ಕೈ ಹಿಡಿಯುವ ಮೂಲಕ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು’ ಎಂಬ ಮಾತು ಸಿದ್ದರಾಮಯ್ಯನವರ ಸರ್ವಾಧಿಕಾರಿ ಧೋರಣೆ ಮತ್ತು ಕೆಲವೇ ವರ್ಗದ ಓಲೈಕೆ ರಾಜಕಾರಣಕ್ಕೆ ಚಾಟಿ ಬೀಸಿದಂತಿದೆ.

ರಾಜ್ಯದಲ್ಲಿ ಬೀಕರ ಬರವಿದ್ದರೂ ಮುಖ್ಯಮಂತ್ರಿ ಸಹಿತ ಸಚಿವರ ಕಛೇರಿ, ಮನೆ ದುರಸ್ತಿ ಹಾಗೂ ವಿಲಾಸೀ ಕಾರುಗಳ ಖರೀದಿಗೆ ಅಸ್ತು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ತನ್ನ ಸಮಾಜವಾದಿ ಮುಖವಾಡವನ್ನು ಕಳಚಿದೆ. ಚುನಾವಣೆಗೆ ಮೊದಲು ಹಿಂದುಳಿದವರು ಮತ್ತು ಅತಿ ಹಿಂದುಳಿದವರಿಗೆ ನೀಡಿದ ಭರವಸೆಯನ್ನು ಮರೆತವರಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಸ್ವತಃ ಕಾಂಗ್ರೆಸ್ ಮುಖಂಡರೇ ಘಂಟಾಘೋಷವಾಗಿ ಹೇಳಿಕೆ ನೀಡಿರುವುದು ರಾಜ್ಯದ ಕಾಂಗ್ರೆಸ್ ಸರಕಾರದ ಜನದ್ರೋಹಿ ನೀತಿಯನ್ನು ಬಹಿರಂಗಪಡಿಸಿದೆ.

ಅಧಿಕಾರದ ದುರಾಸೆಯಿಂದ ನಕಲಿ ಗ್ಯಾರಂಟಿಗಳ ಆಮಿಷಗಳನ್ನು ಒಡ್ಡುವ ಮೂಲಕ ರಾಜ್ಯದ ಜನತೆಗೆ ಮಂಕು ಬೂದಿ ಎರಚಿ, ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವ ಜೊತೆಗೆ ಅವನತಿಯತ್ತ ಸಾಗುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಸ್ವಯಂಕೃತ ಜನವಿರೋಧಿ ನೀತಿಯಿಂದ ಕ್ರಮೇಣ ಪತನಗೊಳ್ಳುವ ಎಲ್ಲಾ ಸಾಧ್ಯತೆಗಳು ಸ್ಪಷ್ಟಗೊಳ್ಳುತ್ತಿರುವುದು ಇಂದಿನ ವಾಸ್ತವಿಕತೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

   

Related Articles

error: Content is protected !!