ನಮ್ಮ ಪ್ರಾರ್ಥನೆಗೆ ಅನುಗುಣವಾಗಿ ದೇವರು ನಮಗೆ ಬೇಡಿದ್ದನ್ನು ಅನುಗ್ರಹಿಸುತ್ತಾನೆ ಎನ್ನುವಲ್ಲಿ ಆ ಪ್ರಾರ್ಥನೆಯಲ್ಲಿನ ನಮ್ಮ ಮನೋಧರ್ಮ ಏನು, ನಮ್ಮ ಇಂಗಿತಗಳೇನು ಎಂಬುದರ ಬಗ್ಗೆ ಸತ್ತ್ವ ಪರೀಕ್ಷೆಯೂ ಇದೆ. ಇದನ್ನು ನಾವೆಂದೂ ಮರೆಯಕೂಡದು. ಬೇಡಿದ್ದನ್ನು ಅನುಗ್ರಹಿಸುವ ಮೂಲಕ ದೇವರು ತನ್ನ ಭಕ್ತನು ತನ್ನಲ್ಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ಸ್ಪಂದಿಸುವನೆನ್ನುವುದು ನಿಜ. ಆದರೆ ಅದಕ್ಕೆ ಪ್ರತಿಯಾಗಿ ಭಕ್ತನು ತನ್ನ ಬದ್ಧತೆಯನ್ನು ಕಾಯ್ದುಕೊಳ್ಳುವುದು ಕೂಡ ಅಗತ್ಯ. ದೇವರು ಭಕ್ತನಿಂದ ತೆಗೆದುಕೊಳ್ಳುವುದು ಆ ಬದ್ಧತೆಯ ಪರೀಕ್ಷೆಯನ್ನೇ. ಬದುಕಿನಲ್ಲಿ ಎರಗಿದ ಕಷ್ಟಗಳು ಪರಿಹಾರವಾಗಿ ನಿಶ್ಚಿಂತೆಯ ದಿನಗಳು ಒದಗಿದಾಗ ಭಕ್ತನು ದೇವರನ್ನು ಮರೆಯಕೂಡದು. ಸಂಪತ್ತು, ಅಂತಸ್ತು, ಅಧಿಕಾರ, ಕೀರ್ತಿ ಪ್ರಾಪ್ತವಾದೊಡನೆ ಅಹಂಕಾರವು ತಲೆಗೇರದಂತೆ ಎಚ್ಚರವಹಿಸಬೇಕಾದ ಭಕ್ತನು ದೇವರನ್ನು ಸರ್ವಥಾ ಮರೆಯಕೂಡದು. ಹಾಗೆಯೇ ಜ್ಞಾನದಿಂದ ಪಾಂಡಿತ್ಯವನ್ನು ಪಡೆದ ಭಕ್ತನು ತನ್ನಲ್ಲಿ ಜ್ಞಾನದ ಅಮಲೇರದಂತೆ ಎಚ್ಚರವಹಿಸಿ ತನ್ನಲ್ಲಿನ ಜ್ಞಾನರೂಪಿ ದೇವರನ್ನು ಸದಾ ನೆನೆಯುತ್ತಿರಬೇಕು. ಸುಖ, ಸಂತೋಷ, ಐಶ್ವರ್ಯ, ಅಧಿಕಾರ ಅಥವಾ ಪಾಂಡಿತ್ಯವನ್ನು ದೇವರು ಏತಕ್ಕೆ ಕರುಣಿಸುತ್ತಾನೆ ? ಅದನ್ನು ಇತರರೊಡನೆ ಹಂಚಿಕೊಂಡು ಎಲ್ಲರೂ ಆನಂದದಿಂದ ಬದುಕುವಂತೆ ಮಾಡಲು, ಅಲ್ಲವೇ? ಆದರೆ ಸ್ವಭಾವತಃ ಸ್ವಾರ್ಥಿಯಾಗಿರುವ ಮನುಷ್ಯನು ಈ ಸಮಷ್ಟಿ ಹಿತದ ಪರಿಕಲ್ಪನೆಯನ್ನು ಸುಲಭವಾಗಿ ಮರೆಯುವನು. ತಾನು ತನ್ನವರೆಂಬ ವ್ಯಾಮೋಹದಲ್ಲಿ ಲೋಭವನ್ನೂ ಬೆಳೆಸಿಕೊಂಡು ಇತರರನ್ನು ಶೋಷಿಸುವನು. ತನ್ನ ಪಾಲಿಗೆ ಸುಖ-ಸಂತೋಷಗಳು ಒದಗಿದ್ದಾಗ್ಯೂ ಇತರರ ಸುಖವನ್ನು ಕಂಡು ಕರುಬುವನು. ಅಸೂಯೆ ಎಂಬ ಜಠರಾಗ್ನಿಯಲ್ಲಿ ಬೆಂದು ನಾಶವಾಗಿ ಹೋಗುವನು!