Home » ಪುಣ್ಯ ಪುರುಷರ ಮಾದರಿ
 

ಪುಣ್ಯ ಪುರುಷರ ಮಾದರಿ

by Kundapur Xpress
Spread the love

ಸುಖಲೋಲುಪತೆಯಲ್ಲಿ ಮುಳುಗಿರುವವರಿಗೆ ದೇವರ ನೆನಪಾಗುವುದುಂಟೆ? ಪ್ರಾಪಂಚಿಕ ಸುಖದಲ್ಲಿ ಇಂದ್ರಿಯಭೋಗಗಳಲ್ಲಿ ಮುಳುಗಿರುವಷ್ಟು ಕಾಲ ದೇವರ ನೆನಪು ಮಾತ್ರವಲ್ಲ: ಬಂಧುಮಿತ್ರರ ನೆನಪು ಕೂಡ ಆಗದು. ಜೀವನದಲ್ಲಿ ಕಷ್ಟಗಳು ನಮ್ಮನ್ನು ಮುತ್ತಿಕೊಂಡಾಗಲೇ ಅವುಗಳಿಂದ ಬಿಡುಗಡೆ ಹೊಂದಲು ನಮಗೆ ದೇವರ ಅನುಗ್ರಹ, ಇನ್ನೊಬ್ಬರ ಸಹಾಯಹಸ್ತಬೇಕೆಂಬ ಸತ್ಯದ ಅರಿವಾಗುವುದು. ಜೀವನದಲ್ಲಿ ಕಷ್ಟಗಳು ಬಾರದೆ ಹೋದರೆ ಸುಖದ ಮತ್ತಿನಲ್ಲಿ ನಾವೇ ಸರ್ವ ಶಕ್ತರೆಂಬ ಭ್ರಮೆಗೆ ಒಳಗಾಗಿ ಅಹಂಕಾರದ ಅಮಲಿನಲ್ಲಿ ತೂರಾಡುವೆವು. ಆದರೆ ಕಷ್ಟಗಳು ಬಂದಾಗ ಅವುಗಳಿಗೆ ಹೆದರಿ ಓಡಿಹೋಗಲು ಮುಂದಾಗುವೆವು! ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಬದುಕನ್ನು ಚೆನ್ನಾಗಿ ನಡೆಸಬೇಕೆಂಬ ಸಂದೇಶವನ್ನು ನಾವು ಪುರಾಣ ಪುರುಷರು, ದೇವಮಾನವರು, ಅವತಾರಪುರುಷರ ಜೀವನದಿಂದ ಪಡೆಯಬಹುದು. ವನವಾಸಕ್ಕೆ ಅಟ್ಟಲ್ಪಟ್ಟ ಶ್ರೀರಾಮ, ಪಂಚಪಾಂಡವರು ಸ್ವತಃ ಸರಣಿ-ಸಂಕಷ್ಟಕ್ಕೆ ಗುರಿಯಾಗಿಯೂ ಧೃತಿಗೆಡದೆ ಅವುಗಳನ್ನು ಎದುರಿಸಿದ ಧೀಮಂತ ಪುಣ್ಯಪುರುಷರು. ಬದುಕಿನಲ್ಲಿ ಕಷ್ಟಗಳು ಬಂದಾಗ ತಲ್ಲಣಗೊಂಡು ಜುಗುಪ್ಸೆಗೆ ಗುರಿಯಾಗುವವರೇ ಬಹಳ. ಇನ್ನು ಕೆಲವರು ತಮ್ಮ ಪಾಲಿಗೆ ಬಂದ ಕಷ್ಟಗಳನ್ನು ಇತರರ ಹೆಗಲಿಗೇರಿಸಿ ಪಲಾಯನ ಮಾಡುವವರು. ಆದರೆ ಎಲ್ಲೋ ಕೆಲವರು ಇತರರ ಕಷ್ಟಗಳನ್ನೂ ತಮ್ಮ ಹೆಗಲಿಗೇರಿಸಿಕೊಂಡು ದೇವರ ಒಲುಮೆಗಾಗಿ ಪರಿತಪಿಸುವರು. ಕಷ್ಟಗಳು ಎದುರಾದಾಗ ತನ್ನ ಭಕ್ತರು ತನ್ನನ್ನು ಕಾಣುವ ಪರಿ ಎಂತು ಎಂಬ ಕುತೂಹಲದಲ್ಲೇ ದೇವರು ತನ್ನ ಭಕ್ತರನ್ನು ಪರೀಕ್ಷೆಗೊಡ್ಡುವನು. ಆ ಪರೀಕ್ಷೆ ಎಂಬ ಬೆಂಕಿಯಲ್ಲಿ ಸ್ವಾರ್ಥ, ಲೋಭ, ಮೋಹ, ಮದ, ಮತ್ಸರಗಳು ಸುಟ್ಟು ಭಸ್ಮವಾದಾಗಲೇ ಭಕ್ತನಿಗೆ ದೇವರ ಸಾನ್ನಿಧ್ಯವು ಪ್ರಾಪ್ತವಾಗುವುದು.

   

Related Articles

error: Content is protected !!