Home » ಐಹಿಕ ಬಂಧನ
 

ಐಹಿಕ ಬಂಧನ

by Kundapur Xpress
Spread the love

ಬದುಕಿನಲ್ಲಿ ಕಷ್ಟಗಳು ಎದುರಾದಾಗ ಕಂಗೆಡುವವರು, ಪಲಾಯನ ಮಾಡುವವರು ಇಲ್ಲವೇ ತಮ್ಮ ಪಾಲಿನ ಕಷ್ಟಗಳನ್ನು ಇತರರ ಹೆಗಲ ಮೇಲೆ ಇಳಿಸುವವರನ್ನು ಏನೆಂದು ಕರೆಯಬೇಕು? ಐಹಿಕ ಪ್ರಪಂಚಕ್ಕೆ ಗಟ್ಟಿಯಾಗಿ ಅಂಟಿಕೊಂಡು ಇಂದ್ರಿಯ ಸುಖಗಳೇ ನಿಜವಾದ ಸುಖವೆಂಬ ಭ್ರಮೆಯನ್ನು ಬೆಳೆಸಿಕೊಂಡವರಿಗೆ ದೇವರ ಮೇಲಿನ ವಿಶ್ವಾಸ, ನಂಬಿಕೆಗಳೆಲ್ಲವೂ ತಾತ್ಕಾಲಿಕ ಬದುಕಿನಲ್ಲಿ ಸ್ವಲ್ಪವೇ ಸಂಕಷ್ಟಗಳು ಎದುರಾದರೂ ಅವರು ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವರು. ದೇವರೊಡನೆ ಕೊಡು-ಕೊಳುವ ವ್ಯವಹಾರದಲ್ಲಿ ನಿರತರಾದವರಿಗೆ ಸಹಜವಾಗಿಯೇ ತಮ್ಮ ಪಾಲಿಗೆ ನಷ್ಟ ಉಂಟಾದಾಗ ದೇವರ ಮೇಲೆ ಸಿಟ್ಟು, ಅಪನಂಬಿಕೆ, ಅಸಹನೆ ಉಂಟಾಗುವುದು. ದೇವರನ್ನು ಅವರು ಆರಾಧಿಸುವುದು ಕೂಡ ಸುಖ ಭೋಗಗಳನ್ನು ಆತ ಕರುಣಿಸಬೇಕೆಂಬ ಸ್ವಾರ್ಥಪರ ಹೆಬ್ಬಯಕೆಯಲ್ಲೇ. ಸತ್ತ ನಂತರ ಸ್ವರ್ಗವೇ ಸಿಗಬೇಕೆಂದು ಆಶಿಸುವವರು ಕೂಡ ಪರೋಕ್ಷವಾಗಿ ಅಪೇಕ್ಷಿಸುವುದು ಐಹಿಕ ಸುಖ ಭೋಗಳನ್ನು ಹೋಲುವ ಅಥವಾ ಅದಕ್ಕಿಂತಲೂ ಕೊಂಚ ಉನ್ನತ ಮಟ್ಟದ ಸುಖ ಭೋಗಗಳನ್ನೇ. ಸೂಕ್ಷ್ಮವಾಗಿ ನೋಡಿದರೆ ನಮಗೆ ಬೇಕಾದ ವಸ್ತುಗಳೆಲ್ಲವೂ ಈ ಐಹಿಕ ಪ್ರಪಂಚದಲ್ಲಿ ಸಿಗುತ್ತವೆ ಎಂದು ನಾವು ತಿಳಿಯುವಷ್ಟು ಕಾಲವೂ ನಮಗೆ ದೇವರ ಅಗತ್ಯ ಕಂಡುಬರುವುದೇ ಇಲ್ಲ! ಅಷ್ಟರ ಮಟ್ಟಿಗೆ ನಾವು ಬಾಹ್ಯ ಪ್ರಪಂಚಕ್ಕೆ ನಮ್ಮನ್ನು ಬಲವಾಗಿ ಬಿಗಿದುಕೊಂಡಿದ್ದೇವೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ದೇವರನ್ನು ಸೇರುವ ಆಸೆ ನಿಮಗಿದ್ದರೆ ನಿಮ್ಮೊಳಗಿನ ಬೇರೆಲ್ಲ ಆಸೆಗಳನ್ನು ಗಂಟು ಮೂಟೆ ಕಟ್ಟಿ ದೂರಕ್ಕೆ ಒಗೆದುಬಿಡಿ. ದೇವರನ್ನಲ್ಲದೆ ಬೇರೇನನ್ನೂ ಬಯಸಬೇಡಿ. ಉಳಿದೆಲ್ಲ ಆಸೆಗಳು ನಿಮ್ಮನ್ನು ಮರಣದಿಂದ ಮರಣಕ್ಕೆ ಮಾತ್ರವೇ ಒಯ್ಯುತ್ತವೆ!

   

Related Articles

error: Content is protected !!