ಕುಂಭಾಸಿ : ಕರ್ನಾಟಕ ಕರಾವಳಿಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ವೈಭವದ ಶ್ರೀ ಗಣೇಶ ಚತುರ್ಥಿಯ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸೆ. 19 ರ ಮಂಗಳವಾರ ಶ್ರೀ ಕ್ಷೇತ್ರದಲ್ಲಿ ಚೌತಿ ಹಬ್ಬಾಚರಣೆ ಮಾಡಲಾಗುತ್ತಿದೆ.
ದೇಶ – ವಿದೇಶಗಳಿಂದ ಭಕ್ತರನ್ನು ಆಕರ್ಷಸುತ್ತಿರುವ ಆನೆಗುಡ್ಡೆ ಕ್ಷೇತ್ರ ದಿನದಿನವೂ ಅಭಿವೃದ್ಧಿ ಹೊಂದುತ್ತಿದೆ. ಅಂತೆಯೇ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ಅವರ ಅನುಕೂಲಗಳಿಗಾಗಿ ಕ್ಷೇತ್ರದಲ್ಲಿ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತಿದೆ. ಶ್ರೀ ಕೆ. ರಮಣ ಉಪಾಧ್ಯಾಯರ ನೇತೃತ್ವದ ಅನುವಂಶಿಕ ಆಡಳಿತ ಮಂಡಳಿ ಭಕ್ತರ ಅನುಕೂಲತೆ ಮತ್ತು ಕ್ಷೇತ್ರದ ಸುರಕ್ಷತೆಗಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ.
ಇಂಟೆಲಿಜೆನ್ಸ್ ವಿಭಾಗದ ಸೂಚನೆಯ ಮೇರೆಗೆ ಇದೀಗ ಮೊದಲಿನಂತೆ ದೇವಸ್ಥಾನದ ಅತಿ ಸಮೀಪಕ್ಕೆ ಯಾವ ವಾಹನಗಳನ್ನೂ ಬಿಡುತ್ತಿಲ್ಲ. ವಾಹನಗಳ ನಿಲುಗಡೆಗಾಗಿಯೇ ದೇವಳದ ಉತ್ತರ ದಿಕ್ಕಿನಲ್ಲಿ ಸುಸಜ್ಜಿತವಾದ ವಾಹನ ತಂಗುದಾಣ ನಿರ್ಮಿಸಲಾಗಿದೆ. ರಾತ್ರಿ ವೇಳೆ ದೇವಸ್ಥಾನದ ಸಂಪರ್ಕವಿರುವ ಎಲ್ಲ ಮಾರ್ಗಗಳನ್ನೂ ಬಂದ್ ಮಾಡಲಾಗುತ್ತಿದೆ. ಎಲ್ಲೆಡೆ ಸೂಕ್ಷ್ಮ ಸಿ ಸಿ ಟಿವಿ ಕಣ್ಗಾವಲು ಏರ್ಪಡಿಸಲಾಗಿದೆ. ಸದ್ಯ ಹೊಸ ವಾಹನಗಳನ್ನು ಪೂಜೆಗಾಗಿ ಮಾತ್ರ ಸಮೀಪಕ್ಕೆ ಒಯ್ಯುವ ಅವಕಾಶ ನೀಡಲಾಗಿದೆ. ಕೊಲ್ಲೂರು, ಮಂದಾರ್ತಿ ಇತರ ಕ್ಷೇತ್ರಗಳಲ್ಲೂ ವಾಹನಗಳನ್ನು ದೇವಳದ ಅತಿ ಸಮೀಪಕ್ಕೆ ಬಿಡಲಾಗುತ್ತಿಲ್ಲ. ಆನೆಗುಡ್ಡೆಯಲ್ಲಿ ಈ ಮೊದಲು ಬಸ್ ಇನ್ನಿತರ ಘನ ವಾಹನಗಳು ನಿಲುಗಡೆಯಾಗುತ್ತಿದ್ದದ್ದು ಪಂಚಾಯತ್ ಸ್ಥಳವಾದ್ದರಿಂದ ಇದೀಗ ದೇವಳದ ಭೂಮಿಯಲ್ಲೇ ಪಾರ್ಕಿಂಗ್ ಕಲ್ಪಿಸಲಾಗಿದೆ ಎಂದು ಶ್ರೀ ಕೆ ರಮಣ ಉಪಾಧ್ಯಾಯರು ತಿಳಿಸಿದ್ದಾರೆ.
ದೇವಳದ ಪೂರ್ವ ಭಾಗದಲ್ಲಿನ ವಕ್ವಾಡಿ ಗ್ರಾಮದಲ್ಲಿ ವರಾಹಿ ಕಾಲುವೆ ಬಳಿಯ ಹತ್ತು ಸೆಂಟ್ಸ್ ಸ್ಥಳವನ್ನು ದಾನಿಗಳೊಬ್ಬರು ದೇವಸ್ಥಾನಕ್ಕಾಗಿ ನೀಡಿದ್ದು, ಅಲ್ಲಿ ಭಕ್ತರ ನೆರವಿನಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ದೊಡ್ಡ ತೆರೆದ ಬಾವಿ ನಿರ್ಮಿಸಲಾಗಿದೆ. ಅಲ್ಲಿ ಮೋಟಾರ್ ಅಳವಡಿಕೆ, ಟ್ಯಾಂಕ್ ನಿರ್ಮಾಣ ಮತ್ತು ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರವೇ ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಯಲಿದೆ.
ಶ್ರೀ ವಿನಾಯಕನ ನಿತ್ಯ ಪಂಚಾಮೃತ ವಿನಿಯೋಗಕ್ಕಾಗಿ ಎರಡು ದನಗಳಿರುವ ಗೋ ಕುಟೀರ ಈಗಾಗಲೇ ಉದ್ಘಾಟನೆಗೊಂಡಿದೆ. ಜೊತೆಗೆ ಯಾಗ, ಹೋಮಗಳಿಗಾಗಿ ಕಟ್ಟಿಗೆ ಸಂಗ್ರಹಾಗಾರವನ್ನು ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ದಾನಿಗಳ ನೆರವಿನಿಂದ ಗರ್ಭಗುಡಿಯಲ್ಲಿ ಶಿಲಾಚ್ಚಾದನೆ ಮಾಡಲಾಗಿದ್ದು, ಇದೇ 17 ಮತ್ತು 18 ರಂದು ಇದರ ಶುದ್ದೀಕರಣ ಮತ್ತು ದೇವಸಮರ್ಪಣೆ ನಡೆಯಲಿದೆ.
ಪ್ರಸಾದ ತಯಾರಿಕೆ ಮತ್ತು ವಿಶೇಷ ಸೇವಾಕರ್ತರ ಪ್ರಸಾದ ವಿತರಣೆ ಮತ್ತು ಹುಂಡಿ ಎಣಿಕೆ ಕಾರ್ಯಗಳಿಗಾಗಿ ದೇವಳದ ಪೂರ್ವ ಭಾಗದಲ್ಲಿ 3.60 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ನೀಲಿ ನಕ್ಷೆ ತಯಾರಿಸಲಾಗಿದ್ದು, ಶೀಘ್ರ ಕಾಮಗಾರಿ ಚಾಲನೆಗೊಳ್ಳಲಿದೆ. ಒಂದು ವರ್ಷದಲ್ಲಿ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ ದೇವಳ ಪ್ರವೇಶ ದ್ವಾರ ಮತ್ತು ವಸಂತ ಮಂಟಪಗಳನ್ನು ಸುಮಾರು 1.30 ಕೋಟಿ ವೆಚ್ಚದಲ್ಲಿ ದಾರು ಶಿಲ್ಪ ಕೆತ್ತನೆಗಳಿಂದ ಅಲಂಕರಿಸಲಾಗಿದ್ದು, ಎರಡನೇ ಹಂತದ ದಾರು ಶಿಲ್ಪ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು.
ಭಕ್ತರ ಸರ್ವಾಭೀಷ್ಟ ಸಿದ್ಧಿದಾಯಕ ಎಂದೇ ಖ್ಯಾತನಾದ ಆನೆಗುಡ್ಡೆ ವಿನಾಯಕನ ಕ್ಷೇತ್ರದಲ್ಲಿ ದಿನದಿನವೂ ಭಕ್ತರು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಸ್ತ್ರೀಶಕ್ತಿ ಯೋಜನೆಯಿಂದಾಗಿ ಕ್ಷೇತ್ರ ಸಂದರ್ಶಿಸುವವರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಎಲ್ಲರಿಗೂ ಇಲ್ಲಿ ಸಮಾಧಾನವಾಗುವಂತೆ, ಸ್ವಾದಿಷ್ಟ ಪ್ರಸಾದ ಭೋಜನ ಸಿಗುವಂತೆ ಆಡಳಿತ ಸಮಿತಿಯು ವ್ಯವಸ್ಥೆ ಮಾಡಿದೆ. ದಾನಿಗಳೂ ನೆರವು ನೀಡುತ್ತಿದ್ದಾರೆ. ಕೆ. ಶ್ರೀರಮಣ ಉಪಾಧ್ಯಾಯರು ಅನುವಂಶಿಕ ಆಡಳಿತ ಧರ್ಮದರ್ಶಿಗಳಾಗಿರುವ ಅನುವಂಶಿಕ ಧರ್ಮದರ್ಶಿ ಮಂಡಳಿಯಲ್ಲಿ ಕೆ. ವಿಠಲ ಉಪಾಧ್ಯಾಯ ಮತ್ತು ಕೆ. ನಿರಂಜನ ಉಪಾಧ್ಯಾಯರು ಅನುವಂಶಿಕ ಜೊತೆ ಧರ್ಮದರ್ಶಿಗಳಾಗಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಹಿರಿಯ ವಿಶ್ರಾಂತ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಪರ್ಯಾಯ ಅರ್ಚಕ ಕೆ. ಶ್ರೀಶ ಉಪಾಧ್ಯಾಯ ಮತ್ತು ಸಹ ಅರ್ಚಕರ ತಂಡ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದೆ.
ಚೌತಿ ಹಬ್ಬದ ಪ್ರಯುಕ್ತ ಸೆ. 18ರ ಸೋಮವಾರ ಮಧ್ಯಾನ್ಹ 3 ಗಂಟೆಯಿಂದ ಕೋಟೇಶ್ವರದ ಶ್ರೀ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯವರಿಂದ ಭಜನೆ, ಸಂಜೆ 5ರಿಂದ ಸುಶಾಸನ ಉಡುಪಿ ಪ್ರಸ್ತುತಿಯಲ್ಲಿ ಪ್ರೊ. ಪವನ್ ಕಿರಣ್ ಕೆರೆ ಪರಿಕಲ್ಪಿತ, ಸುಧಾಕರ ಆಚಾರ್ಯ ಉಡುಪಿ ಸಂಯೋಜಿತ “ಕಾಶ್ಮೀರ ವಿಜಯ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿವೆ.
ಸೆ.19ರ ಮಂಗಳವಾರ ಚತುರ್ಥಿಯಂದು ಅಷ್ಟೊತ್ತರ ಸಹಸ್ರ ನಾಳಿಕೇರ ಗಣಯಾಗ, ವಿಶೇಷ ಪೂಜಾದಿಗಳು ನಡೆಯುತ್ತವೆ. ಮಧ್ಯಾನ್ಹ 3 ರಿಂದ ವಿಶ್ವೇಶ್ವರ ಭಜನಾ ಮಂಡಳಿ ಆನೆಗುಡ್ಡೆ, ಕುಂಭಾಶಿ ಇವರಿಂದ ಭಜನೆ, ಸಂಜೆ 4 ರಿಂದ ಅಭಿಜ್ಞಾ ನೃತ್ಯಭೂಮಿ ಟ್ರಸ್ಟ್ ಉಡುಪಿಯ ನೃತ್ಯ ವಿದುಷಿ ಡಾ. ರಶ್ಮಿ ಗುರುಮೂರ್ತಿಯವರ ಶಿಷ್ಯೆಯರಿಂದ ನೃತ್ಯ ಕಾರ್ಯಕ್ರಮ, ಸಂಜೆ 6ರಿಂದ ಯಕ್ಷಾ0ತರಂಗ ಕೋಟ ಇವರಿಂದ “ಚಿತ್ರಸೇನ ಕಾಳಗ” ಯಕ್ಷಗಾನ ಮತ್ತು ರಾತ್ರಿ 9 ರಿಂದ ಅತಿಥಿ ಕಲಾವಿದರ ಕೂಡುವಿಕೆಯಿಂದ ದಶಾವತಾರ ಸೇವೆಯಾಟ “ಕೃಷ್ಣಾರ್ಜುನ ಕಾಳಗ” ಯಕ್ಷಗಾನಗಳು ನಡೆಯಲಿವೆ