ಸಚ್ಚಾರಿತ್ರ್ಯವನ್ನು ರೂಢಿಸಿಕೊಳ್ಳುವುದು ಬದುಕಿನ ಮಹತ್ತರ ಸವಾಲುಗಳಲ್ಲಿ ಒಂದು. ಕಳ್ಳತನ, ಸುಳ್ಳು, ಕಪಟ, ಹಠ, ಬಲಾತ್ಕಾರ, ಹಿಂಸೆ, ಅಭಕ್ಷ್ಯ ಭೋಜನ ಮತ್ತು ಪ್ರಮಾದವೇ ಮೊದಲಾದ ಶಾಸ್ತ್ರ ವಿರುದ್ಧವಾಗಿರುವ ನೀಚ ಕರ್ಮಗಳನ್ನು ಕಾಯಾ, ವಾಚಾ, ಮನಸಾ ಮಾಡದೇ ಇರುವುದು ಸಚ್ಚಾರಿತ್ರದ ಲಕ್ಷಣ. ಗೀತೆಯಲ್ಲಿ ಶ್ರೀಕೃಷ್ಣನು ಬೋಧಿಸುವ ಏಳು ಶ್ರೇಣಿಗಳ ತ್ಯಾಗದಲ್ಲಿ ಇವಿಷ್ಟು ಮೊದಲ ಮೆಟ್ಟಿಲಲ್ಲಿ ಹೇಳಲ್ಪಟ್ಟಿವೆ. ತ್ಯಾಗದಿಂದ ಭಗವತ್ ಪ್ರಾಪ್ತಿ ಹೇಗೆ ಎಂಬ ವಿಚಾರದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿರುವ ಬೋಧೆ ಅನುಪಮವಾದದ್ದು. ಗೃಹಸ್ಥಾಶ್ರಮದಲ್ಲಿ ಇದ್ದುಕೊಂಡೂ ತ್ಯಾಗದ ಮೂಲಕ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯವೆಂಬ ಅಂಶವನ್ನು ಕೃಷ್ಣ ಸ್ಪಷ್ಟಪಡಿಸುತ್ತಾನೆ. ಪರಮಾತ್ಮನನ್ನು ಪಡೆಯುವ ಸಾಧನಗಳಲ್ಲಿ ತ್ಯಾಗಕ್ಕೆ ಅಗ್ರವಾದ ಸ್ಥಾನ. ತ್ಯಾಗವೆಂದರೆ ಅನೇಕರಲ್ಲಿ ಪುಣ್ಯಪ್ರಾಪ್ತಿಗಾಗಿ ತಮ್ಮಲ್ಲಿರುವ ಧನ-ಕನಕಗಳನ್ನು ಇಲ್ಲದವರಿಗೆ ದಾನಮಾಡುವುದೇ ಆಗಿದೆ. ಪುಣ್ಯವನ್ನು ಆರ್ಜಿಸುವ ಸಲುವಾಗಿ ಮಾಡುವ ದಾನವು ಕೇವಲ ಕೊಟ್ಟು-ತೆಗೆದುಕೊಳ್ಳುವ, ಲಾಭ-ನಷ್ಟದ ವ್ಯವಹಾರವಾದೀತೇ ವಿನಾ ಭಗವಂತನನ್ನು ಸೇರುವುದಕ್ಕೆ ಅನುವು ಮಾಡಿಕೊಡದು. ಪುಣ್ಯದ ಬಲದಲ್ಲಿ ಸ್ವರ್ಗಸುಖ ಪ್ರಾಪ್ತವಾದರೂ ಪುಣ್ಯದ ಪ್ರಮಾಣ ನಶಿಸುತ್ತಲೇ ಮತ್ತೆ ಇಹಲೋಕಕ್ಕೆ ಮರಳುವುದು ತಪ್ಪದು. ದುರಾಸೆ ಎನ್ನುವುದು ನಮ್ಮಲ್ಲಿನ ಎಲ್ಲ ಒಳ್ಳೆಯ ಗುಣಗಳನ್ನು ಅಳಿಸಿಬಿಡುತ್ತದೆ ಎನ್ನುತ್ತದೆ ‘ಮಹಾವೀರ ವಾಣಿ’. ಪುಣ್ಯಪ್ರಾಪ್ತಿಗಾಗಿ ಮಾಡುವ ದಾನದ ಮೂಲ ದುರಾಸೆಯಲ್ಲೇ ಅಡಗಿದೆ! ದುರಾಸೆಯನ್ನು ಗೆಲ್ಲಲು ಸಾಧ್ಯವಾದರೆ ದಾನದ ಮಹತ್ವವು ತ್ಯಾಗದ ಎತ್ತರಕ್ಕೆ ಏರಬಲ್ಲುದು. ಸಚ್ಚಾರಿತ್ರ್ಯವನ್ನು ರೂಢಿಸಿಕೊಳ್ಳುವ ಪ್ರಯತ್ನದಲ್ಲಿ ತ್ಯಾಗ ಶೀಲತೆಯನ್ನು ಮೈದುಂಬಿಕೊಳ್ಳುವ ಹಾದಿ ಸುಗಮವಾಗಿರುವುದು