ಕುಂದಾಪುರ : ನಗರದ ರಾಮಕ್ಷತ್ರಿಯ ಯುವಕ ಮಂಡಳಿ ಹಾಗೂ ರಾಮ ಕ್ಷತ್ರಿಯರ ಸಂಘ ಕುಂದಾಪುರ ಇವರ ವತಿಯಿಂದ 5 ದಿನಗಳ ಕಾಲ ಧಾರ್ಮಿಕ ಸಭೆ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿದ 58 ನೇ ವರ್ಷದ ಗಣೇಶೋತ್ಸವ ಸಮಾರಂಭದ ವೈಭವದ ಶೋಭಾಯಾತ್ರೆಯು ಶನಿವಾರ ಸಂಜೆ ರಾಮ ಮಂದಿರದ ದೇವಸ್ಥಾನದ ವಠಾರದಿಂದ ಆಕರ್ಷಕ ಸ್ತಬ್ದ ಚಿತ್ರ ಭಜನಾ ತಂಡಗಳು ಚಂಡೆ ಮೇಳ ಹಾಗೂ ಮಂಗಳವಾದ್ಯಗಳೊಂದಿಗೆ ಅದ್ದೂರಿಯಾಗಿ ನಡೆಯಿತು
ದೇವಸ್ಥಾನದ ಎದುರಿನಿಂದ ಹೊರಟ ಮೆರವಣಿಗೆಯ ಮೊದಲು ರಾಮ ಮಂದಿರದ ಅರ್ಚಕರಾದ ಜಯರಾಮ ಉಪಾಧ್ಯಾಯ ರವರ ನೇತೃತ್ವದಲ್ಲಿ ಶ್ರೀ ಗಣೇಶನಿಗೆ ಮಂಗಳಾರತಿ ಮಾಡಿ ತೆಂಗಿನಕಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು
ಶೋಭಾಯಾತ್ರೆಯಲ್ಲಿ ಕಣ್ಮನ ಸೆಳೆಯುವ ವೈವಿಧ್ಯಮಯ ಸ್ತಬ್ಧ ಚಿತ್ರಗಳು ಶಿಲ್ಪಗೊಂಬೆಗಳ ಬಳಗದ ನೃತ್ಯ ಚಂಡೇ ನೃತ್ಯ ಸಂಗೀತ ನೃತ್ಯ ಭಜನೆ ಯುವಕ ಯುವತಿಯರ ನೃತ್ಯ ಶೋಭಾಯಾತ್ರೆಗೆ ಮೆರುಗು ನೀಡಿತ್ತು
ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸೇರಿದಂತೆ ಸಾವಿರಾರು ಮಂದಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ದಾರಿ ಉದ್ದಕ್ಕೂ ಅಲ್ಲಲ್ಲಿ ಜನ ಸಾಲು ಸಾಲಾಗಿ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು ಶೋಭಾಯಾತ್ರೆಯ ಕೊನೆಯಲ್ಲಿ ಸುಡುಮದ್ದು ಪ್ರದರ್ಶನಗೊಂಡಿತು
ಖಾರ್ವಿಕೇರಿಯ ನದಿ ತೀರದಲ್ಲಿ ವಿಸರ್ಜನಾ ಪೂಜೆಯೊಂದಿಗೆ ಶ್ರೀ ಗಣೇಶನನ್ನು ಪಂಚ ಗಂಗಾವಳಿ ನದಿಯಲ್ಲಿ ವಿಸರ್ಜಿಸಲಾಯಿತು